
ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣವನ್ನು ಪೊಲೀಸರು ಬೇಕಂತಲೇ ಮುಚ್ಚಿಟ್ಟಿದ್ದರೇ ಎಂಬ ಅನುಮಾನಗಳು ಮೂಡಿರುವ ಬೆನ್ನಲ್ಲೇ ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮಾಹಿತಿ ಕೋರಿದೆ.
ಶೀನಾಳ ಮೃತದೇಹ ಪತ್ತೆಯಾದ ಬಳಿಕವೂ ರಾಯಗಡ ಪೊಲೀಸರು ಎಫ್ಐಆರ್ ಏಕೆ ದಾಖಲಿಸಿಲ್ಲ, ಆಕಸ್ಮಿಕ ಸಾವಿನ ವರದಿ (ಎಡಿಆರ್) ಏಕೆ ಸಲ್ಲಿಸಿಲ್ಲ ಎಂಬೆಲ್ಲ ಪ್ರಶ್ನೆಗಳಿಗೂ ಉತ್ತರಿಸಿ, 15 ದಿನಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಡಿಜಿಪಿಗೆ ಸರ್ಕಾರ ಆದೇಶಿಸಿದೆ. ಮಾಜಿ ಡಿಜಿಪಿ ಸಂಜೀವ್ ದಯಾಳ್ ರಾಯಗಡ ಪೊಲೀಸರ ವಿರುದ್ಧ ಕೈಗೊಂಡ ಕ್ರಮಕ್ಕೆ ಸಂಬಂಧಿಸಿ ಒಂದು ಪುಟದ ವರದಿ ಸಲ್ಲಿಸಿದ್ದಾರೆ. ಆದರೆ, ಅದು ತೃಪ್ತಿದಾಯಕ ವಾಗಿಲ್ಲ. ಅದಕ್ಕಾಗಿ, ಹೊಸದಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮಹಾರಾಷ್ಟ್ರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಕೆ ಪಿ ಬಕ್ಷಿ ತಿಳಿಸಿದ್ದಾರೆ.
ಇದೇ ವೇಳೆ, ಶೀನಾ ಪ್ರಕರಣ ತನಿಖೆ ವಿಳಂಬವಾ ಗುವುದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕೈವಾಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಬಕ್ಷಿ, ಈ ಬಗ್ಗೆ ಸಿಬಿಐನಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ. ಈ ನಡುವೆ, ಗುರುವಾರ ಬಂಧಿತರಾದ ಪೀಟರ್ ಮುಖರ್ಜಿ ಅವರನ್ನು ಭಾನುವಾರವೂ ಸಿಬಿಐ ವಿಚಾರಣೆ ನಡೆಸಿದೆ. ಇದೇ ವೇಳೆ, `ತನ್ನ ಅಪ್ಪನ ವಿರುದ್ಧ ಹೊರಿಸಲಾದ ಆರೋಪಗಳೆಲ್ಲ ಸುಳ್ಳು' ಎಂದು ಪೀಟರ್ ಪುತ್ರ ರಾಹುಲ್ ತಿಳಿಸಿದ್ದಾರೆ.
Advertisement