ತಿಮ್ಮಪ್ಪನ ದರ್ಶನಕ್ಕೆ ಅಡ್ಡಿ ಇಲ್ಲ, ವದಂತಿಗೆ ಕಿವಿ ಕೊಡಬೇಡಿ : ಟಿಟಿಡಿ

ಆಂಧ್ರಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಮುಂದುವರೆದಿದ್ದು, ಮಳೆಯ ಅಬ್ಬರಕ್ಕೆ ತಿರುಪತಿ ನಗರ ಮತ್ತು ಪವಿತ್ರ ಧಾರ್ಮಿಕ ಕ್ಷೇತ್ರ ತಿರುಮಲದ ಸುತ್ತಮುತ್ತಲ ಹಲವು ತಗ್ಗುಪ್ರದೇಶಗಳು ಜಲಾವೃತ್ತವಾಗಿದೆ...
ತಿರುಮಲದಲ್ಲಿ ಭಾರಿ ಮಳೆ (ಸಂಗ್ರಹ ಚಿತ್ರ)
ತಿರುಮಲದಲ್ಲಿ ಭಾರಿ ಮಳೆ (ಸಂಗ್ರಹ ಚಿತ್ರ)
Updated on

ಅಮರಾವತಿ: ಆಂಧ್ರಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಮುಂದುವರೆದಿದ್ದು, ಮಳೆಯ ಅಬ್ಬರಕ್ಕೆ ತಿರುಪತಿ ನಗರ ಮತ್ತು ಪವಿತ್ರ ಧಾರ್ಮಿಕ ಕ್ಷೇತ್ರ ತಿರುಮಲದ  ಸುತ್ತಮುತ್ತಲ ಹಲವು ತಗ್ಗುಪ್ರದೇಶಗಳು ಜಲಾವೃತ್ತವಾಗಿದೆ.

ಭಾರಿ ಮಳೆಯಿಂದಾಗಿ ತಿರುಮಲ ಬೆಟ್ಟದಲ್ಲಿ ಹಲವು ಪುಟ್ಟ ಜಲಪಾತಗಳು ಸೃಷ್ಟಿಯಾಗಿದ್ದು, ನೀರಿನ ರಭಸಕ್ಕೆ ಬೆಟ್ಟದ ಮೇಲಿರುವ ಮಣ್ಣು ಸಡಿಲವಾಗುತ್ತಿದ್ದಂತೆಯೇ ಬಂಡೆ ಕಲ್ಲುಗಳು ಕೆಳಗೆ  ಉರುಳುತ್ತಿವೆ. ಈ ಹಿನ್ನಲೆಯಲ್ಲಿ ಪ್ರಸ್ತುತ ತಿರುಪತಿಯ ಅಲಿಪಿರಿಯಿಂದ ತಿರುಮಲಕ್ಕೆ ಹೋಗುವ ಕಾಲುದಾರಿಯ ಬಂದ್ ನಿರ್ಧಾರವನ್ನು ಮುಂದುವರೆಸಲಾಗಿದ್ದು, ಬಸ್ ಗಳು ಸಂಚರಿಸುವ  ರಸ್ತೆಗಳಲ್ಲಿಯೂ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ತಿರುಮಲಕ್ಕೆ ತೆರಳುವ ಭಕ್ತಾದಿಗಳಿಗೆ ತೀವ್ರ ತೊಂದರೆಯಾಗಿದ್ದು, ಮಳೆ ನಿಲ್ಲುವವರೆಗೂ ರಸ್ತೆಗಳ ದುರಸ್ತಿ ಸಾಧ್ಯವಿಲ್ಲ  ಎಂಬಂತಾಗಿದೆ. ಹೀಗಾಗಿ ತಿರುಮಲಕ್ಕೆ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳ ಪೈಕಿ ಒಂದು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಇತ್ತ ಪವಿತ್ರ ಕ್ಷೇತ್ರ ತಿರುಮಲ ದೇವಾಲಯದ ಬಳಿ ಕೂಡ ಸತತ ಮಳೆಯಾಗುತ್ತಿದ್ದು, ದೇವಸ್ಥಾನ ಪಕ್ಕದ ಪುಷ್ಕರಣಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ದೇವಾಲಯದ ಆವರಣದಲ್ಲಿರುವ ತುಗ್ಗು  ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಂಗಡಿ ಮಾಲೀಕರು ಅಂಗಡಿಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ತಿರುಮಲದಲ್ಲಿರುವ ಅತಿಥಿ ಸತ್ಕಾರ ಸಭಾಂಗಣದ ಒಳಗೂ ಮಳೆ ನೀರು  ನುಗ್ಗಿದ್ದು, ಅಲ್ಲಿ ಆಶ್ರಯ ಪಡೆದಿದ್ದ ಭಕ್ತರಿಗೆ ತೀವ್ರ ತೊಂದರೆಯಾಗಿದೆ.

ತಿಮ್ಮಪ್ಪನ ದರ್ಶನಕ್ಕೆ ಅಡ್ಡಿ ಇಲ್ಲ, ಸುಳ್ಳು ಸುದ್ದಿ ನಂಬಬೇಡಿ ಎಂದ ಟಿಟಿಡಿ
ಇನ್ನು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ತಿರುಮಲ ದೇವಸ್ಥಾನದಲ್ಲಿ ತಿಮ್ಮಪ್ಪನ ದರ್ಶನವನ್ನು ಬಂದ್ ಮಾಡಿಲ್ಲ ಎಂದು ತಿರುಪತಿ ತಿರುಮಲ ದೇವಾಲಯ ಸಮಿತಿ ಸ್ಪಷ್ಟಪಡಿಸಿದೆ.  ಶ್ರೀನಿವಾಸನ ದರ್ಶನಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದ್ದು, ದರ್ಶನಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಸಾಮಾನ್ಯದಂತೆಯೇ ದರ್ಶನ  ಮುಂದುವರೆದಿದೆ ಎಂದು ಟಿಟಿಡಿ ಅಧ್ಯಕ್ಷ ಸಿಹೆಚ್ ಕೃಷ್ಣಮೂರ್ತಿ ಅವರು ಹೇಳಿದ್ದಾರೆ.

"ತಿರುಮಲ ರಸ್ತೆಯಲ್ಲಿ ಬಸ್ ಸಂಚರಿಸುತ್ತಿಲ್ಲ, ಶ್ರೀನಿವಾಸನ ಆಲಯಕ್ಕೆ ನೀರು ನುಗ್ಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ   ಶ್ರೀನಿವಾಸನ ದರ್ಶನ ಎಂದಿನಂತೆ ನಡೆಯುತ್ತಿದೆ. ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಕೃಷ್ಣಮೂರ್ತಿ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com