
ಲಖನೌ: ವಿವಾದಾದ್ಮಕ ಹೇಳಿಕೆಗಳನ್ನು ನೀಡಿ ಹಲವು ವಿರೋಧಗಳಿಗೆ ಕಾರಣವಾಗಿದ್ದ ಉತ್ತರ ಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಅಜಂ ಖಾನ್ ಅವರು ಈಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದು, ಅಲ್ಪಸಂಖ್ಯಾತರಾಗಿರುವ ಮುಸ್ಲಿಮರೊಂದಿಗಿರಲು ಅಸ್ಸಾಂ ರಾಜ್ಯಪಾಲರಿಗೆ ಸಮಸ್ಯೆಯಿದ್ದರೆ ಅವರು ನೇಪಾಳಕ್ಕೆ ಹೋಗಲಿ ಎಂದು ಮಂಗಳವಾರ ಹೇಳಿದ್ದಾರೆ.
ಭಾರತದಲ್ಲಿರುವ ಮುಸ್ಲಿಮರು ಭಾರತದಿಂದ ಪಾಕಿಸ್ತಾನಕ್ಕೆ ಅಥವಾ ಬಾಂಗ್ಲಾದೇಶಕ್ಕೆ ಹೋಗಲು ಮುಕ್ತ ಸ್ವಾತಂತ್ರ್ಯ ಹೊಂದಿದ್ದಾರೆ. ತಸ್ಲೀಮಾ ನಸ್ರೀನ್ ಅವರಂತೆ ಇತರರಿಗೆ ಕಿರುಕುಳ ಹಾಗೂ ಸಮಸ್ಯೆಯುಂಟಾಗುತ್ತಿದ್ದರೆ ಅವರು ಭಾರತದಿಂದ ಅಲ್ಲಿಗೆ ಹೋಗಬಹುದು. ಮುಸ್ಲಿಮರು ಎಲ್ಲಿಗೆ ಬೇಕಾದರೂ ಹೋಗಲು ಮುಕ್ತರಾಗಿದ್ದಾರೆ. ಅವರಲ್ಲಿ ಹಲವು ಪಾಕಿಸ್ತಾನಕ್ಕೆ ಹೋಗಿದ್ದಾರೆಂದು ಅಸ್ಸಾಂ ರಾಜ್ಯಪಾಲ ಪಿಬಿ. ಆಚಾರ್ಯ ಅವರು ಪತ್ರಿಕಾಗೋಷ್ಟಿಯೊಂದರಲ್ಲಿ ಭಾನುವಾರ ಹೇಳಿದ್ದರು.
ಪಿಬಿ. ಆಚಾರ್ಯ ಅವರ ಈ ಹೇಳಿಕೆಗೆ ಕಿಡಿಕಾರಿರುವ ಅಜಂಖಾನ್ ಅವರು ಇಂದು ಪ್ರತಿಕ್ರಿಯೆ ನೀಡಿದ್ದು, ನಾವು ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ಕಬ್ರಿಸ್ತಾನ (ಸ್ಮಶಾನ)ಕ್ಕೆ ಹೋಗಲು ಬಯಸುತ್ತೇವೆ. ನಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ನಮಗೆ ಸ್ಮಶಾನವನ್ನು ಸಿದ್ಧಮಾಡಿ. ನಮ್ಮೊಂದಿಗಿರಲು ಅಸ್ಸಾಂ ರಾಜ್ಯಪಾಲರಿಗೆ ಸಮಸ್ಯೆಯುಂಟಾಗುವುದಾದರೆ ಅವರು ನೇಪಾಳಕ್ಕೆ ಹೋಗಲಿ. ಅವರಿಗೆ ನೇಪಾಳದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದ್ದಾರೆ.
“ದೇಶದಲ್ಲಿ ನಾಗರಿಕ ಯುದ್ಧ ನಡೆಸುವವರು ಬಹಳಷ್ಟು ಜನರಿದ್ದಾರೆ. ದೇಶದಲ್ಲಿ ನಾಗರೀಕ ಯುದ್ಧ ಮಾಡುತ್ತಿರುವವರು ಅವರ ದಾರಿಯನ್ನು ನಿರ್ಧರಿಸಬೇಕಿದೆ. ರಾಜ್ಯಪಾಲರ ವಿರುದ್ಧ ಯಾರು ಯಾರ ಬಳಿ ದೂರು ನೀಡುತ್ತಾರೆ? ರಾಷ್ಟ್ರಪತಿಯವರಿಗೆ ಎಲ್ಲಾ ರೀತಿಯ ಮಾಹಿತಿಯಿರುತ್ತದೆ”
ಈ ರೀತಿಯ ವಿಷಯಗಳು ಸಂವಿಧಾನವನ್ನು ಅವಮಾನಿಸಿದಂತಾಗಿದೆ. 1992ರಲ್ಲಿ ನಡೆದ ಘಟನೆ ಕೂಡ ಸಂವಿಧಾನಕ್ಕೆ ವಿರುದ್ಧವಾದದ್ದು. ಅಯೋಧ್ಯೆಯಲ್ಲಿ ಮಸೀದಿಯನ್ನು ಧ್ವಂಸ ಮಾಡಲಾಗಿತ್ತು. ಇದೀಗ ಅದು ಅಲ್ಲಿಲ್ಲ. ರಾಮ ಮಂದಿರ ಅಲ್ಲಿದೆ. ಅಂತಹುದೇ ವಿಷಯಗಳನ್ನು ಪುನರಾವರ್ತಿಸುವುದರಿಂದ ವಾತಾವರಣವನ್ನು ವಿಷಮಯಗೊಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ರಾಮ ಮಂದಿರ ಕುರಿತಂತೆ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಲವ್ ಜಿಹಾದ್ ಎಂಬ ವಿಷಯಗಳನ್ನಿಡಿದು ದೇಶದಲ್ಲಿ ಹೆಸರು ಪಡೆಯಲು ಪ್ರಯತ್ನ ನಡೆಸಿದ್ದರು. ಆದರೆ ಈ ಪ್ರಯತ್ನದಲ್ಲಿ ಅವರು ವಿಫಲರಾದರು. ಇದೀಗ ಮತ್ತೆ ಸುದ್ದಿಗೆ ಬರುಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದು, ಈ ಮೂಲಕ ಹಿಂದೂಗಳ ಭಾವನೆಯನ್ನು ಕೆರಳಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ
Advertisement