
ನವದೆಹಲಿ: ದೇಶದ ಸಂವಿಧಾನದ ಶಿಲ್ಪಿಯಾಗಿ ಭಾರತಕ್ಕೆ ಒಗ್ಗೂಡುವ ಶಕ್ತಿಯನ್ನು ಬಿ ಆರ್ ಅಂಬೇಡ್ಕರ್ ಸೃಷ್ಟಿಸಿದರು ಎಂದು ಗೃಹಸಚಿವ ರಾಜನಾಥ ಸಿಂಗ್ ಮಂಗಳವಾರ ಹೇಳಿದ್ದಾರೆ.
ಡಾ. ಬಿ ಆರ್ ಅಂಬೇಡ್ಕರ್ ಅವರ ೧೨೫ ನೆ ಜಯಂತಿಯ ಅಂಗವಾಗಿ ಲೋಕಸಭೆಯಲ್ಲಿ 'ಸಂವಿಧಾನಕ್ಕೆ ಬದ್ಧತೆ' ಎಂಬ ವಿಷಯವಾಗಿ ನಡೆಯುತ್ತಿರುವ ಎರಡು ದಿನಗಳ ಚರ್ಚೆಯಲ್ಲಿ ಮಾತನಾಡಿದ ಗೃಹಸಚಿವ, ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಮೊದಲ ಗೃಹ ಸಚಿವ ಸರದಾರ್ ವಲ್ಲಭಾಯ್ ಪಟೇಲ್ ಅವರಿಗೂ ಗೌರವ ಸೂಚಿಸಿದ್ದಾರೆ.
"ಭಾರತಕ್ಕೆ ಸ್ವಾತಂತ್ರ್ಯ ಒದಗಿದಾಗ ಹಲವಾರು ರಾಜಪ್ರಭುತ್ವದ ರಾಜ್ಯಗಳಾಗಿ ಹಂಚಿಹೋಗಿತ್ತು. ದೇಶವನ್ನು ಒಗ್ಗೂಡಿಸುವುದಕ್ಕೆ ಸಾಧ್ಯವೇ ಎಂದು ಎಲ್ಲರೂ ಚಕಿತರಾಗಿದ್ದರು. ಸರದಾರ್ ವಲ್ಲಭಾಯ್ ಪಟೇಲ್ ಅವರು ನಮಗೆ ಭಾರತವನ್ನು ನೀಡಿದರು ಆದರೆ ಆಗ ಭಾರತವನ್ನು ಒಗ್ಗೂಡಿಸಿ ಮುನ್ನಡೆಸುವ ಶಕ್ತಿಯ ಅವಶ್ಯಕತೆ ಒದಗಿ ಬಂದಿತ್ತು" ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
"ಆ ಒಗ್ಗೂಡಿಸುವ ಶಕ್ತಿಯೇ ಸಂವಿಧಾನ. ಇದು ಅತಿ ಪ್ರಮುಖ ಪಾತ್ರ ವಹಿಸಿದೆ. ಅವರು ಎಷ್ಟು ತೊಂದರೆಗಳನ್ನು ಅನುಭವಿಸಿದರು ಎಂಬುದು ತಿಳಿದಿದೆ, ಅವರಿಗೆ ಖಂಡಿತಾ ನೋವಾಗಿರುತ್ತದೆ ಆದರೂ ಅವರು ತಮ್ಮ ಸಂಯಮ ಕಾಪಡಿಕೊಂಡರು" ಎಂದು ಅಂಬೇಡ್ಕರ್ ಬಗ್ಗೆ ಗೌರವ ಸೂಚಿಸಿದ್ದಾರೆ.
"ಆದರೆ ಭಾರತದಲ್ಲಿ ನನಗೆ ತಾರತಮ್ಯವಾಗಿದೆ ಆದುದರಿಂದ ಬೇರೆಡೆಗೆ ಹೋಗುತ್ತೇನೆ ಎಂದು ಅವರೆಂದೂ ಹೇಳಲಿಲ್ಲ" ಎಂಬ ರಾಜನಾಥ್ ಅವರ ಮಾತಿಗೆ ಕೆಲವು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಆದರೆ ಈ ಹೇಳಿಕೆಯಲ್ಲಿ ವಿವಾದಾತ್ಮಕವಾದದ್ದು ಏನು ಇಲ್ಲ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಅಂಬೇಡ್ಕರ್ ಅವರನ್ನು ದಲಿತ ನಾಯಕರನ್ನಾಗಿ ಅಷ್ಟೇ ನೋಡಬಾರದು ಅದು 'ಸಂಕುಚಿತ ಮನೋಭಾವ' ಆಗುತ್ತದೆ ಎಂದು ಕೂಡ ರಾಜನಾಥ್ ಹೇಳಿದ್ದಾರೆ.
Advertisement