ಕಾಂಡೋಮ್ಗೆ ಕತ್ತಲ ಜಾಗ

ಕಾಂಡೋಮ್ ಬಳಕೆಗೆ ತಡರಾತ್ರಿಯವರೆಗೆ ಕಾಯಬೇಕಾಗುತ್ತದೆ ಎಂಬುದು ಕಾಮನ್‍ಸೆನ್ಸ್ ಬಿಡಿ. ಆದರೆ ಕಾಂಡೋಮ್ ಜಾಹೀರಾತು ನೋಡಲೂ ನೀವಿನ್ನು ತಡರಾತ್ರಿಯವರೆಗೆ ಕಾಯಬೇಕು..!
ಕಾಂಡೋಮ್ ಜಾಹಿರಾತು (ಸಂಗ್ರಹ ಚಿತ್ರ)
ಕಾಂಡೋಮ್ ಜಾಹಿರಾತು (ಸಂಗ್ರಹ ಚಿತ್ರ)

ನವದೆಹಲಿ: ಕಾಂಡೋಮ್ ಬಳಕೆಗೆ ತಡರಾತ್ರಿಯವರೆಗೆ ಕಾಯಬೇಕಾಗುತ್ತದೆ ಎಂಬುದು ಕಾಮನ್‍ಸೆನ್ಸ್ ಬಿಡಿ. ಆದರೆ ಕಾಂಡೋಮ್ ಜಾಹೀರಾತು ನೋಡಲೂ ನೀವಿನ್ನು ತಡರಾತ್ರಿಯವರೆಗೆ  ಕಾಯಬೇಕು!

ಟಿವಿಯಲ್ಲಿ ಪ್ರಸಾರವಾಗುವ ಕಾಂಡೋಮ್ ಜಾಹೀರಾತುಗಳನ್ನು ಹಗಲಲ್ಲಿ ಪ್ರಸಾರ ಮಾಡದಂತೆ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಪ್ರಸ್ತಾಪ ಅಂಗೀಕೃತವಾದರೆ  ಕಾಂಡೋಮ್ ಆ್ಯಡ್‍ಗಳು ರಾತ್ರಿ 11 ಗಂಟೆಯ ನಂತರವೇ ಪ್ರಸಾರವಾಗುತ್ತವೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ರಾಜಕಾರಣಿಗಳೂ ಸೇರಿದಂತೆ ಒಂದು ವಲಯದ ನೋಡುಗರಿಂದ  ಹರಿದುಬಂದಿರುವ ದೂರುಗಳ ಪ್ರವಾಹದ ಹಿನ್ನೆಲೆಯಲ್ಲಿ ಈ ಪ್ರಸ್ತಾಪ ಮುಂದಿಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ಸದ್ಯ ಅವುಗಳ ಪ್ರಸಾರದ ಸಮಯದ ಮೇಲೆ  ಯಾವುದೇ ನಿರ್ಬಂಧವಿಲ್ಲ. ಯಾವುದೇ ಚಾನೆಲ್‍ನಲ್ಲಿ ಯಾವುದೇ ಸಮಯದಲ್ಲಿ ಅವು ಪ್ರಸಾರವಾಗಬಹುದು.

ಆದರೆ ಭವಿಷ್ಯದಲ್ಲಿ ಇದು ಬದಲಾಗಲಿದೆ ಎಂದು ಪ್ರಸಾರ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟಿವಿ ಕಾರ್ಯಕ್ರಮಗಳಲ್ಲಿ ಎರಡು ವಿಭಾಗವಿದೆ ಸಾಮಾನ್ಯ ಮತ್ತು ನಿರ್ಬಂಧಿತ.  ನಿರ್ಬಂಧಿತ ಕಾರ್ಯಕ್ರಮಗಳು ರಾತ್ರಿ 11ರಿಂದ 5 ಗಂಟೆಯವರೆಗೆ ಮಾತ್ರ ಪ್ರಸಾರವಾಗುತ್ತವೆ. ಮಕ್ಕಳು ಇವನ್ನು ವೀಕ್ಷಿಸದಿರುವಂತೆ ಮಾಡುವುದು ಉದ್ದೇಶ. ಕಾಂಡೋಮ್  ಜಾಹೀರಾತುಗಳನ್ನೇ ನಿಷೇಧಿಸಬೇಕೆಂದು ಒತ್ತಾಯವಿದೆ.

ಆದರೆ ನಿಷೇಧ ಸಾಧ್ಯವಿಲ್ಲ. ಆದ್ದರಿಂದ ಅವುಗಳ ಸಮಯವನ್ನು ನಿರ್ಬಂಧಿಸುವ ಕುರಿತ ಚಿಂತನೆ ನಡೆದಿದೆ. ಅಂತರ್ಸಚಿವಾಲಯ  ಸಮಿತಿಯೊಂದು ಈ ವಿಚಾರ ಚರ್ಚಿಸಲಿದೆ. ಸಮಿತಿ ಏನನ್ನು ನಿರ್ಧರಿಸುತ್ತದೆಯೋ ಅದರಂತೆ ಎಲ್ಲ ವಾಹಿನಿಗಳಿಗೆ ಪತ್ರ ಕಳುಹಿಸುತ್ತೇವೆ ಎಂದವರು ಹೇಳಿದ್ದಾರೆ. ನಾಗ್ಪುರದಿಂದ ಈ ಕುರಿತು  ದೂರು ನೀಡಿರುವ ವಕೀಲರ ಪತ್ರವೊಂದನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com