
ಹೈದರಾಬಾದ್: ತಮ್ಮ ನೆಚ್ಚಿನ ನಾಯಕನನ್ನು ಮೆಚ್ಚಿಸುವ ಸಲುವಾಗಿ ಆತನನ್ನು ಸ್ವಾಗತಿಸಲು ಪಾರಿವಾಳಗಳಿಗೆ ಪಟಾಕಿ ಕಟ್ಟಿ ಮೇಲಕ್ಕೆ ಹಾರಿಬಿಟ್ಟಿರುವ ಘಟನೆಯೊಂದು ಶನಿವಾರ ಗೋದಾವರಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೋರಿ ಆಂಧ್ರಪ್ರದೇಶ ಕಾಂಗ್ರೆಸ್ ಸಮತಿ ಅಧ್ಯಕ್ಷ ಎನ್.ರಘುವೀರ ರೆಡ್ಡಿ ಅವರು ಗೋದಾವರಿಗೆ ಭೇಟಿ ನೀಡಿದ್ದರು. ಈ ವೇಳೆ ನಾಯಕನನ್ನು ಸ್ವಾಗತಿಸುವ ಸಂತಸದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಮೇಲಕ್ಕೆ ಹಾರುವಾಗ ಪಾರಿವಾಳಗಳು ಪಟಾಕಿಯಿಂದ ಬೇರ್ಪಡುತ್ತದೆ ಎಂಬ ಮೂರ್ಖತನದಿಂದ ಪಾರಿವಾಳಗಳಿಗೆ ಕತ್ತಿಗೆ ತಮ್ಮ ಪಕ್ಷದ ಬಾವುಟ ಕಟ್ಟಿ ನಂತರ ಅವುಗಳ ದೇಹಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚಿ ಮೇಲಕ್ಕೆ ಹಾರಿ ಬಿಟ್ಟಿದ್ದಾರೆ. ಮೇಲಕ್ಕೆ ಹೋಗುತ್ತಿದ್ದಂತೆ ಪಟಾಕಿ ಸಿಡಿದಿದೆ. ಈ ವೇಳೆ ಪಟಾಕಿ ಸಿಡಿದ ಕಾರಣ ಪಾರಿವಾಳಗಳು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಈ ದುಷ್ಕೃತ್ಯವೀಗ ಪ್ರಾಣಿ ಸ್ನೇಹಿಗಳನ್ನು ಕೆರಳಿಸಿದ್ದು, ಅಪರಾಧಿಗಳ ವಿರುದ್ಧ ಇದೀಗ ಅಲ್ಲಿನ ಪೊಲೀಸರು ಸೆಕ್ಷನ್ 11 (ಪ್ರಾಣಿಗಳ ವಿರುದ್ಧದ ಕ್ರೂರತ್ವ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಪ್ರತಿಕ್ರಿಯೆ ನೀಡಿರುವ ರಘುವೀರ್ ರೆಡ್ಡಿ ಅವರು, ಪಾರಿವಾಳಿಗಳಿಗೆ ಪಟಾಕಿ ಕಟ್ಟಿ ಹಾರಿ ಬಿಟ್ಟಿರುವ ವಿಷಯ ನನಗೆ ಗೊತ್ತಿಲ್ಲ. ಪಟಾಕಿಗಳನ್ನು ಸಿಡಿಸುತ್ತಿರುವುದಷ್ಟೇ ನನ್ನ ಆರಿವಿಗೆ ಬಂದಿದ್ದು, ಈ ರೀತಿ ಮಾಡುವುದು ನಿಜಕ್ಕೂ ತಪ್ಪು. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದ್ದಾರೆ.
Advertisement