ದಾದ್ರಿ ಪ್ರಕರಣ: ಯುಪಿ ಪೊಲೀಸರಿಂದ ಮಹೇಶ್ ಶರ್ಮಾ, ಸಂಗೀತ್ ಸೋಮ್ ವಿರುದ್ಧ ದೂರು..?

ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಮಹೇಶ್ ಶರ್ಮಾ, ಬಿಜೆಪಿ ಮುಖಂಡ ಸಂಗೀತ್ ಸೋಮ್ ಮತ್ತು ಬಿಎಸ್ ಪಿ ಪಕ್ಷದ ಮುಖಂಡ ನಸೀಮುದ್ದೀನ್ ಸಿದ್ದಿಕಿ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ...
ಮಹೇಶ್ ಶರ್ಮಾ, ಸಂಗೀತ್ ಸೋಮ್ ಮತ್ತು ಬಿಎಸ್ ಪಿ ಮುಖಂಡ ನಸೀಮುದ್ದೀನ್ ಸಿದ್ದಿಕಿ (ಸಂಗ್ರಹ ಚಿತ್ರ)
ಮಹೇಶ್ ಶರ್ಮಾ, ಸಂಗೀತ್ ಸೋಮ್ ಮತ್ತು ಬಿಎಸ್ ಪಿ ಮುಖಂಡ ನಸೀಮುದ್ದೀನ್ ಸಿದ್ದಿಕಿ (ಸಂಗ್ರಹ ಚಿತ್ರ)

ಲಖನೌ: ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಮಹೇಶ್ ಶರ್ಮಾ, ಬಿಜೆಪಿ ಮುಖಂಡ ಸಂಗೀತ್ ಸೋಮ್ ಮತ್ತು ಬಿಎಸ್ ಪಿ ಪಕ್ಷದ  ಮುಖಂಡ ನಸೀಮುದ್ದೀನ್ ಸಿದ್ದಿಕಿ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ಗೋಮಾಂಸ ಭಕ್ಷಿಸಿದ ಎಂಬ ಆರೋಪ ಹೊರಿಸಿ ಮೊಹಮದ್ ಇಕ್ಲಾಕ್ ಎಂಬ ಯುವಕನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ದಾದ್ರಿ ಪೊಲೀಸರು ಈ ಸಂಬಂಧ  ಪ್ರಮುಖ ರಾಜಕೀಯ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಮುಸ್ಲಿಂ ಯುವಕನನ್ನು ಕೊಂದ ಬಳಿಕ ದಾದ್ರಿಯಲ್ಲಿ ಉಂಟಾದ ಹಿಂಸಾಚಾರದ ಹಿನ್ನಲೆಯಲ್ಲಿ ಅಲ್ಲಿ  ನಿಷೇಧಾಜ್ಞೆ ಹೇರಲಾಗಿತ್ತು. ಆದರೂ ಕೇಂದ್ರ ಸಚಿವರಾದ ಮಹೇಶ್ ಶರ್ಮಾ, ಬಿಜೆಪಿ ಮುಖಂಡ ಸಂಗೀತ್ ಸೋಮ್ ಮತ್ತು ಬಿಎಸ್ ಪಿ ಮುಖಂಡ ನಸೀಮುದ್ದೀನ್ ಸಿದ್ದಿಕಿ ಅವರು  ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗ್ರಾಮಸ್ಥರನ್ನು ಭೇಟಿ ಮಾಡಿದ್ದರು.

ಆದರೆ ಈ ಮುಖಂಡರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂತ್ರಸ್ಥ ಕುಟುಂಬವನ್ನು ಮಾತ್ರ ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. ಈ ಆದರೆ ಮೂವರು ನಾಯಕರು ಪೊಲೀಸರ  ಸೂಚನೆಯನ್ನು ಮೀರಿದ್ದರಿಂದ ಇವರ ವಿರುದ್ಧ ಪ್ರಕರಣ ದಾಖಲಿಸಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ದಾದ್ರಿ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ  ಸಂಜಯ್ ಕುಮಾರ್ ಯಾದವ್ ಅವರು, ನಿಷೇಧಾಜ್ಞೆ ಉಲ್ಲಂಘಿಸಿ ಗ್ರಾಮಸ್ಥರನ್ನು ಭೇಟಿ ಮಾಡಿದ ಮೂವರು ನಾಯಕರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ವರದಿ ತಯಾರಿಸಲಾಗಿದೆ  ಎಂದು ಹೇಳಿದ್ದಾರೆ.

ಇನ್ನು ಇದೇ ಪ್ರಕರಣ ಸಂಬಂಧ ಈಗಾಗಲೇ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಬಿಜೆಪಿ ಮುಖಂಡ ಸಂಗೀತ್ ಸೋಮ್ ಅವರು ಮುಜಾಫರ್ ನಗರದ ಶಾಸಕರಾಗಿದ್ದು, ತಮ್ಮ ವಿವಾದಾತ್ಮಕ  ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಇನ್ನು ಪ್ರಕರಣದ ತನಿಖೆ ಕುರಿತಂತೆ ಈ ಹಿಂದೆ ಹೇಳಿಕೆ ನೀಡಿದ್ದ ಅವರು, ಸುಳ್ಳು ಪ್ರಕರಣ ದಾಖಲಿಸಿ ಅಮಾಯಕರನ್ನು ಈ ಪ್ರಕರಣದಲ್ಲಿ ಸಿಲುಕಿಸುವ  ಪ್ರಯತ್ನ ಮಾಡಿದರೆ ಅವರಿಗೆ ಸರಿಯಾದ ಪಾಠಕಲಿಸಲು ನಾವು ಸಿದ್ಧರಾಗಿದ್ದೇವೆ ಎಂಬ ಪ್ರಚೋದನಾತ್ಮಕ ಹೇಳಿಕೆ ನೀಡುವ ಮೂಲಕ ಸಂಗೀತ್ ಸೋಮ್ ಈಗಾಗಲೇ ಉತ್ತರ ಪೊಲೀಸರ  ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಸಂಬಂಧವೂ ಇವರ ವಿರುದ್ಧ ಪ್ರಕರಣ ದಾಖಲಾಗುವ ಕುರಿತು ಮಾತುಗಳು ಕೇಳಿಬರುತ್ತಿವೆ.

ಗೌತಮಬುದ್ಧ ನಗರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಮಹೇಶ್ ಶರ್ಮಾ, ಸಂತ್ರಸ್ಥ ಮನೆಗೆ ಭೇಟಿ ನೀಡಿದ್ದ ವೇಳೆ ರಾಜಕೀಯ ವೈಷಮ್ಯವೇ ಕೊಲೆಗೆ ಕಾರಣ ಎಂದು ಹೇಳಿದ್ದರು. ಈ  ಬಗ್ಗೆಯೂ ಪ್ರಕರಣ ದಾಖಲಿಸುವ ಕುರಿತು ಪೊಲೀಸರು ಚಿಂತನೆಯಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com