ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು ತ್ರಿರಾಷ್ಟ್ರ ಪ್ರವಾಸ ಕೈಗೊಂಡಿದ್ದು, ಆರು ದಿನಗಳ ಈ ಪ್ರವಾಸದಲ್ಲಿ ಜೋರ್ಡಾನ್, ಇಸ್ರೇಲ್ ಮತ್ತು ಪ್ಯಾಲೆಸ್ಟೆನ್ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಣಬ್ ಮುಖರ್ಜಿಯವರು ಮೊದಲಿಗೆ ಜೋರ್ಡಾನ್ಗೆ ಪ್ರಯಾಣ ಬೆಳೆಸಿದರು. ಇರಾಕ್ನ ಮೊಸುಲ್ ಪಟ್ಟಣದಲ್ಲಿ ಐಸಿಸ್ ಉಗ್ರಗಾಮಿಗಳು ಹಿಡಿದಿಟ್ಟುಕೊಂಡಿರುವ 39 ಮಂದಿ ಭಾರತೀಯರ ಬಿಡುಗಡೆ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಸಹಕರಿಸುವಂತೆ ಮನವಿ ಮಾಡಲಿದ್ದಾರೆ. ಎರಡು ದಿನಗಳ ಜೋರ್ಡಾನ್ ಭೇಟಿಯ ಬಳಿಕ ರಾಷ್ಟ್ರಪತಿಗಳು ಅಕ್ಟೋಬರ್ 12ರಂದು ಪ್ಯಾಲೆಸ್ಟೆನ್ ಗೆ ಮತ್ತು ಬಳಿಕ ಅಕ್ಟೋಬರ್ 13ರಂದು ಇಸ್ರೇಲ್ಗೆ ಪ್ರಯಾಣ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳು ಪಯಣಕ್ಕೆ ಮುನ್ನ ರಾಷ್ಟ್ರಪತಿಗಳಿಗೆ ದೆಹಲಿಯಲ್ಲಿ ಔಪಚಾರಿಕವಾಗಿ ಬೀಳ್ಕೊಟ್ಟರು. ಪ್ರಣಬ್ ಅವರು ಈ ರಾಷ್ಟ್ರಗಳಿಗೆ ಭೇಟಿ ನೀಡುತ್ತಿರುವ ಮೊತ್ತ ಮೊದಲ ಭಾರತದ ಮುಖ್ಯಸ್ಥ ಎನಿಸಿಕೊಳ್ಳಲಿದ್ದಾರೆ.
ಜೋರ್ಡಾನ್ ಭೇಟಿ ಕಾಲದಲ್ಲಿ ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ ವೃದ್ಧಿ ಅವಕಾಶಗಳ ಬಗ್ಗೆ ಮುಖರ್ಜಿ ರ್ಚಚಿಸಲಿದ್ದಾರೆ. ರಾಜತಾಂತ್ರಿಕ ಬಾಂಧವ್ಯ ಸ್ಥಾಪಿಸಿದಂದಿನಿಂದ ಕಳೆದ 65 ವರ್ಷಗಳ ಅವಧಿಯಲ್ಲಿ ಈ ರಾಷ್ಟ್ರಗಳಿಗೆ ಪ್ರಯಾಣ ಮಾಡಿದ ಮೊದಲ ಭಾರತೀಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪ್ರಣಬ್ ಪಾತ್ರರಾಗಲಿದ್ದಾರೆ. 1988ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಜೋರ್ಡಾನ್ಗೆ ಭೇಟಿ ನೀಡಿದ್ದರು.