
ರಾಜಕೋಟ್: ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ವಜಾಗೊಳ್ಳುವುದು ಸಾಮಾನ್ಯವಾಗಿ ಹೋಗಿದೆ. ಇದಕ್ಕೆ ಉದಾಹರಣೆಯಂತೆ ಗುಜರಾತ್ ನ ಶಿಕ್ಷಕಿಯೊಬ್ಬರು ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ತಯಾರು ಮಾಡುವಾಗ ಹೋರಾಟಗಾರ ಹಾರ್ದಿಕ್ ಪಟೇಲ್ ಕುರಿತಂತೆ ಪ್ರಶ್ನೆ ಕೇಳಿ ವಜಾಗೊಂಡಿರುವ ಘಟನೆ ಗುಜರಾತ್ ನಲ್ಲಿ ಶನಿವಾರ ನಡೆದಿದೆ.
ಮೂಲಗಳ ಪ್ರಕಾರ ರಾಜಕೋಟ್‌ನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದು ಎಂದು ಹೆಸರು ಮಾಡಿರುವ ರಶ್ನಿಕಾಂತ ಮೋದಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಲೀನಾ ವಚ್ಛಾನಿ (28) ಕಾರ್ಯ ನಿರ್ವಹಿಸುತ್ತಿದ್ದು, 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ ತಯಾರಿಸುವ ಜವಾಬ್ದಾರಿ ಹೊತ್ತಿದ್ದರು. ಪ್ರಶ್ನೆ ಪತ್ರಿಕೆ ತಯಾರು ಮಾಡುವಾಗ ಶಿಕ್ಷಕಿ ಹಾರ್ದಿಕ್ ಪಟೇಲ್ ಕುರಿತಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಇದರಲ್ಲಿ ಪಟೇಲ್ ಸಮುದಾಯ ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಿದೆ? ಹೋರಾಟದ ನಾಯಕ ಯಾರು? ಮೀಸಲಾತಿ ಹೋರಾಟದಲ್ಲಿ ಆತ್ಮಹತ್ಯೆಗೆ ಶರಣಾದ ಯುವಕನ ಹೆಸರೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕಿದ್ದರು.
ಶಿಕ್ಷಕಿಯ ಈ ಪ್ರಶ್ನೆಗಳು ಇದೀಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ಶಿಕ್ಷಕಿ ಬಗ್ಗೆ ಅಲ್ಲಿನ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಶಿಕ್ಷಕಿ ಕ್ಷಮಾಪಣೆ ಕೇಳಿದರೂ ಕ್ಷಮಿಸದ ಶಾಲೆಯ ಆಡಳಿತಯು ಆಕೆಯನ್ನು ಕೆಲಸದಿಂದ ಮಾಡಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ವಜಾಗೊಂಡ ಶಿಕ್ಷಕಿ ಲೀನಾ ವಚ್ಛಾನಿ ಸಹ ಪಟೇಲ್ ಸಮುದಾಯಕ್ಕೆ ಸೇರಿದವರಾಗಿದ್ದು, ಉದ್ದೇಶ ಪೂರ್ವಕವಾಗಿಯೇ ಈ ಪ್ರಶ್ನೆಗಳನ್ನು ಸೇರಿಸಿದ್ದರು ಎಂಬ ಆರೋಪಗಳು ಇದೀಗ ಕೇಳಿಬರುತ್ತಿವೆ.
Advertisement