

ಬಿಹಾರ: ಬಿಹಾರದ 49 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಅಂತ್ಯವಾಗಿದ್ದು, ಬಿಜೆಪಿ ಪರ ಅಲೆ ಎಂದು ಮಹಾಮೈತ್ರಿಯಿಂದ ಹೊರ ಬಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಸೋಮವಾರ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ಪರವಾದ ಅಲೆ ಇದ್ದು, ಅವರೇ ಬಿಹಾರದಲ್ಲಿ ಮುಂದಿನ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಹೇಳಿದ್ದಾರೆ. ಅಲ್ಲದೆ ಬಿಜೆಪಿ ಉತ್ತಮ ಕೆಲಸಗಳ ಬಗ್ಗೆ ತಾವು ಸದಾ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.
ನಿನ್ನೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮುಲಾಯಂ ಸಿಂಗ್ ಯಾದವ್ ಅವರು, ನಿತಿಶ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ವಂಚಿಸಿ ಮಹಾ ಮೈತ್ರಿಕೂಟದ ತೆಕ್ಕೆಗೆ ಸೆಳೆದಿದ್ದಾರೆ. ಮೇವು ಹಗರಣದಲ್ಲಿ ಶಿಕ್ಷೆಗೆ ಗುರಾಯಾಗಿರುವ ಕೆಲ ನಿತಿಶ್ ಬೆಂಬಲಿಗರು ಲಾಲು ಅವರನ್ನು ಜನತಾ ಪರಿಹಾರಕ್ಕೆ ಕರೆತಂದಿದ್ದಾರೆ ಎಂದು ಆರೋಪಿಸಿದ್ದರು.
ನಿತಿಶ್ ಕುಮಾರ್ ಅವರು ಆರಂಭದಲ್ಲಿ ಜನತಾ ಪರಿವಾರದ ಬ್ಯಾನರ್ ಅಡಿಯಲ್ಲಿ ಮೈತ್ರಿಕೂಟದ ಪಕ್ಷಗಳು ಸ್ಪರ್ಧಿಸಬೇಕು ಎನ್ನುವ ನಿಲುವಿಗೆ ಬದ್ಧವಾಗಿದ್ದರು. ನಂತರ ಸಮಾಜವಾದಿ ಪಕ್ಷಕ್ಕೆ ಕೇವಲ ಐದು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ನೀಡುವುದಾಗಿ ವಂಚಿಸಿದ್ದರಿಂದ ಮೈತ್ರಿಕೂಟದಿಂದ ಹೊರಬರಬೇಕಾಯಿತು ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.