ಭಾರತೀಯ ಸೇನೆಯ ಶೌರ್ಯಕ್ಕೆ ತಲೆಬಾಗಿದ ಕಡಲ್ಗಳ್ಳರು..!

ಸತತ ಏಳು ವರ್ಷಗಳ ಪರಿಶ್ರಮ, ಒಟ್ಟು 52 ಯುದ್ಧ ನೌಕೆಗಳು ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ಅಪಾರ ಪ್ರಮಾಣ ಭಾರತೀಯ ನೌಕದಳದ ಸೈನಿಕರ ಶೌರ್ಯ-ಸಾಹಸದ ಪ್ರತೀಕವಾಗಿ...
ಭಾರತೀಯ ನೌಕಾಪಡೆಯಿಂದ ಕಡಲ್ಗಳ್ಳರ ಬಂಧನ (ಸಂಗರ್ಹ ಚಿತ್ರ)
ಭಾರತೀಯ ನೌಕಾಪಡೆಯಿಂದ ಕಡಲ್ಗಳ್ಳರ ಬಂಧನ (ಸಂಗರ್ಹ ಚಿತ್ರ)

ನವದೆಹಲಿ: ಸತತ ಏಳು ವರ್ಷಗಳ ಪರಿಶ್ರಮ, ಒಟ್ಟು 52 ಯುದ್ಧ ನೌಕೆಗಳು ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ಅಪಾರ ಪ್ರಮಾಣ ಭಾರತೀಯ ನೌಕದಳ ಸೈನಿಕರ ಶೌರ್ಯ-ಸಾಹಸದ  ಪ್ರತೀಕವಾಗಿ ಅರೇಬಿಯನ್ ಸಮುದ್ರ ಇಂದು ಕಡಲ್ಗಳ್ಳರಿಂದ ಮುಕ್ತವಾಗಿದೆ.

ರಷ್ಯಾ, ಅಮೆರಿಕ, ಚೀನಾದಂತಹ ಬಲಾಢ್ಯ ಸೇನಾಪಡೆಗಳಿಗೆ ಮಣ್ಣುಮುಕ್ಕಿಸುತ್ತಿದ್ದ ಸೊಮಾಲಿಯಾದ ಕಡಲ್ಗಳ್ಳರ ಹಾವಳಿಯನ್ನು ಕೇವಲ ನಾಲ್ಕೇ ವರ್ಷದಲ್ಲಿ ಭಾರತೀಯ ನೌಕಾಪಡೆ ತಡೆದಿದೆ.  ಅಷ್ಟು ಮಾತ್ರವಲ್ಲದೇ ಕಡಲ್ಗಳ್ಳರ ರಾಜದಾನಿಯಂತಿದ್ದ ಅರೇಬಿಯನ್ ಸಮುದ್ರವನ್ನು ಕಡಲ್ಗಳ್ಳರ ಮುಕ್ತಿಗೊಳಿಸಿದೆ. ಭಾರತ-ಆಫ್ರಿಕಾ ನಡುವಿನ ಪ್ರಮುಖ ಸಮುದ್ರ ಮಾರ್ಗವಾಗಿರುವ  ಅರೇಬಿಯನ್ ಸಮುದ್ರದಲ್ಲಿ ಪ್ರತೀ ವರ್ಷ ಸುಮಾರು 23 ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ಈ ಹಿಂದೆ ಸಾಕಷ್ಟು ಬಾರಿ ಕಡಲ್ಗಳ್ಳರು ಸರಕು ಸಾಗಾಣಿಕಾ ಹಡಗುಗಳನ್ನು ಅಪಹರಿಸಿದ್ದರು.  ಅಲ್ಲದೆ ನೂರಾರು ಭದ್ರತಾಪಡೆಯ ಸೈನಿಕರನ್ನು ಮತ್ತು ಹಡಗುಗಳ ಸಿಬ್ಬಂದಿಗಳನ್ನು ಹತ್ಯೆಗೈದಿದ್ದರು. ಸಾವಿರಾರು ಕೋಟಿ ವ್ಯವಹಾರ ನಡೆಯುವ ಹಡಗುಗಳನ್ನು ಅಪಹರಿಸಿ, ಬಿಡುಗಡೆಗಾಗಿ  ನೂರಾರು ಕೋಟಿ ಬೇಡಿಕೆ ಇಡುತ್ತಿದ್ದರು. ಇದಲ್ಲದೆ ಇಂಧನ, ಆಯುಧಗಳ ಬೇಡಿಕೆಯೂ ಕಡಲ್ಗಳ್ಳರ ಪಟ್ಟಿಯಲ್ಲಿರುತ್ತಿದ್ದವು.

ಕಡಲ್ಗಳ್ಳರ ಹಾವಳಿಗೆ ಹೆದರಿದ ಅದೆಷ್ಟೋ ಉದ್ಯಮಿಗಳು ತಮ್ಮ ಬೋಟ್ ಗಳ ತಂಟೆಗೆ ಅವರು ಬಾರದಿರಲಿ ಎಂಬ ಕಾರಣಕ್ಕಾಗಿ ಅವರಿಗೆ ಕಾನೂನು ಬಾಹಿರವಾಗಿ ಇಂಧನ, ಅತ್ಯಾಧುನಿಕ  ಬೋಟ್ ಗಳು ಮತ್ತು ಆಯುಧಗಳನ್ನು ನೀಡುವ ಮೂಲಕ ಪರೋಕ್ಷವಾಗಿ ಅವರನ್ನು ಬಲಪಡಿಸಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಲ್ಗಳ್ಳರ ಹಾವಳಿ ಹೆಚ್ಚಾಗಲು ಕಾರಣವಾಗಿತ್ತು.



ಸೊಮಾಲಿಯಾ ಕಡಲ್ಗಳ್ಳರ ಹಾವಳಿಗೆ ವಿಶ್ವದ ದೊಡ್ಡಣ್ಣ ಅಮೆರಿಕ ಸೇರಿದಂತೆ ಭಾರತಕ್ಕಿಂತ ತಾನು ಬಲಿಷ್ಠ ಎಂದು ಬೀಗುತ್ತಿರುವ ಚೀನಾ ಕೂಡ ತತ್ತರಿಸಿಹೋಗಿತ್ತು. ಕಡಲ್ಗಳ್ಳರನ್ನು ಮಟ್ಟ ಹಾಕಲು  ಹೋಗಿದ್ದ ಚೀನಾದ ಕೆಂಪು ಸೇನೆಯ ಹಡಗುಗಳೇ ಕಡಲ್ಗಳ್ಳರ ದಾಳಿ ತುತ್ತಾಗಿದ್ದವು. ಇದಲ್ಲದೆ ಕೆಲ ಭಾರತೀಯ ಹಡಗುಗಳು ಕೂಡ ಕಡಲ್ಗಳ್ಳರ ಹಾವಳಿಗೆ ತುತ್ತಾಗಿತ್ತು. ಹೀಗಾಗಿ ಅಂತಿಮವಾಗಿ  ಕಡಲ್ಗಳ್ಳರ ವಿರುದ್ಧ ಸಮರಕ್ಕಿಳಿದ ಭಾರತೀಯ ನೌಕಾಪಡೆ ಅಂತಿಮವಾಗಿ ಅರೇಬಿಯನ್ ಸಮುದ್ರದಲ್ಲಿನ ಕಡಲ್ಗಳ್ಳರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. 2008ರಲ್ಲಿ ಭಾರತೀಯ ನೌಕಾಪಡೆ  ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ ಆರಂಭಿಸಿತ್ತು. ಅರೇಬಿಯನ್ ಸಮುದ್ರ ಮಾರ್ಗವಾಗಿ ಸಂಚರಿಸುವ ಹಡಗುಗಳ ರಕ್ಷಣೆಗೆ ತಾನು ಎದೆ ಕೊಟ್ಟು ನಿಂತ ನೌಕಾಪಡೆ ತನ್ನ ಕಾರ್ಯದಲ್ಲಿ  ಸಂಪೂರ್ಣವಾಗಿ ಯಶಸ್ವಿಯಾಗಿತ್ತು. ಸೇನಾ ಮೂಲಗಳ ಪ್ರಕಾರ ಭಾರತ ಈ ವರೆಗೂ ಒಟ್ಟು 52 ಸಮರ ನೌಕೆಗಳು ಮತ್ತು ಅಪಾರ ಪ್ರಮಾಣದ  ನೌಕಾದಳದ ಸಿಬ್ಬಂದಿಗಳನ್ನು ಬಳಸಿ ಕಡಲ್ಗಳ್ಳರ ಅಟ್ಟಹಾಸವನ್ನು ಮಟ್ಟಹಾಕಿತು.

ಸೇನಾ ಮೂಲಗಳ ಪ್ರಕಾರ ಭಾರತೀಯ ನೌಕಾಪಡೆ ಕಾರ್ಯಾಚರಣೆಗಿಳಿದ ಕೇವಲ ನಾಲ್ಕೇ ವರ್ಷದಲ್ಲಿ ಈ ತನ್ನ  ಕಾರ್ಯಾಚರಣೆ ಪೂರ್ಣಗೊಳಿಸಿದ್ದು, ಅರೇಬಿಯನ್ ಸಮುದ್ರದಲ್ಲಿ ಶೇ.90ರಷ್ಟು ಕಡಲ್ಗಳ್ಳರನ್ನು ಸೆರೆಹಿಡಿದಿದೆ. ಇದಾಗ್ಯೂ ಅಳಿದುಳಿದಿರುವ ಕಡಲ್ಗಳ್ಳರ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನು ಮೂರು ವರ್ಷದಲ್ಲಿ ಅರೇಬಿಯನ್ ಸಮುದ್ರ ಕಡಲ್ಗಳ್ಳತನದ ಪ್ರದೇಶ ಎಂಬ ಅಪಖ್ಯಾತಿಯಿಂದ ಮುಕ್ತಿಪಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com