
ಮುಂಬೈ: ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಅವರ ಆಪ್ತ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಸೋಮವಾರ ಮಸಿ ಬಳೆದಿದ್ದ ಶಿವಸೇನಾ ಕಾರ್ಯಕರ್ತರ ಕ್ರಮಕ್ಕೆ ಎಲ್ಲೆಡೆ ಟೀಕೆ ಕೇಳಿಬರುತ್ತಿದ್ದರೆ ಇತ್ತ ಉದ್ಧವ್ ಠಾಕ್ರೆ ಅವರನ್ನು ಸನ್ಮಾನಿಸಿದ್ದಾರೆ.
ಸುಧೀಂದ್ರ ಕುಲಕರ್ಣಿ ಅವರ ಮುಖದ ಮೇಲೆ ನಿನ್ನೆ ಮಸಿ ಬಳಿದಿದ್ದ ಆರು ಮಂದಿ ಕಾರ್ಯಕರ್ತರನ್ನು ಮುಂಬೈನ ತಮ್ಮ ನಿವಾಸ ಮಾತೋಶ್ರೀಯಲ್ಲಿ ಭೇಟಿ ಮಾಡಿ ಅವರನ್ನು ಅಭಿನಂದಿಸಿದ್ದಾರೆ.
ಕಾರ್ಯಕರ್ತರ ಕ್ರಮವನ್ನು ಸಮರ್ಥಿಸಿಕೊಂಡ ಶಿವಸೇನಾ ವಕ್ತಾರೆ ಮನಿಶಾ ಖಾಯಂಡೆ, ಅವರು ದೇಶದ ಒಳಿತಿಗಾಗಿ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸುಧೀಂದ್ರ ಕುಲಕರ್ಣಿಯವರು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ. ಪಾಕಿಸ್ತಾನ ಭಾರತದ ಮೇಲೆ ಕಾರ್ಗಿಲ್ ಯುದ್ಧ ಮಾಡಿದ್ದ ಸಂದರ್ಭದಲ್ಲಿ ಖುರ್ಷಿದ್ ಮೊಹಮ್ಮದ್ ಕಸೂರಿಯವರು ಪರ್ವೇಜ್ ಮುಷರಫ್ ಅವರಿಗೆ ಸಲಹಾಗಾರರಾಗಿದ್ದರು ಎಂದರು.
ಕುಲಕರ್ಣಿಯವರ ಮುಖವನ್ನು ಕಪ್ಪು ಮಾಡಿದ್ದು ನಾಗರಿಕ ಪ್ರತಿಭಟನೆ. ಪಾಕಿಸ್ತಾನದ ಖ್ಯಾತ ಗಜಲ್ ಹಾಡುಗಾರ ಗುಲಾಂ ಆಲಿಯವರು ತಮ್ಮ ಪ್ರದರ್ಶನವನ್ನು ನಿಲ್ಲಿಸುವ ಮೂಲಕ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರು. ಅಂತಹದೇ ನಿರ್ಧಾರವನ್ನು ಕುಲಕರ್ಣಿಯವರು ತೆಗೆದುಕೊಳ್ಳಬಹುದಾಗಿತ್ತು. ಮಹಾರಾಷ್ಟ್ರ, ಮುಂಬೈ ಮತ್ತು ಇಡೀ ದೇಶದ ಜನತೆ ಶಿವಸೇನೆಯ ಕ್ರಮವನ್ನು ಒಪ್ಪಿಕೊಂಡಿದ್ದಾರೆ ಎಂದು ಮನಿಶಾ ಖಾಯಂಡೆ ಸಮರ್ಥಿಸಿಕೊಂಡಿದ್ದಾರೆ.
ದೇಶಾದ್ಯಂತ ನಮ್ಮ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ದೇಶಪ್ರೇಮದ ಬಗ್ಗೆ ಮಾತನಾಡುವವರು ಬೇರೆ ರೀತಿಯಲ್ಲಿ ಹಣೆಪಟ್ಟಿ ಹಚ್ಚುತ್ತಾರೆ. ಇದು ದೇಶಕ್ಕೆ ತುಂಬಾ ಬೇಸರದ ಸಂಗತಿ ಎಂದು ಮನಿಶಾ ಖಾಯಂಡೆ ನುಡಿದಿದ್ದಾರೆ.
Advertisement