
ನವದೆಹಲಿ: ತಮಿಳುನಾಡು ಸಿಎಂ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ. 23ಕ್ಕೆ ಮುಂದೂಡಿದೆ.
ಸೋಮವಾರ ವಿಚಾರಣೆ ವೇಳೆ ಜಯಲಲಿತಾ ಅವರಿಗೆ ಹಣ ನೀಡಿದ ಆರೋಪ ಹೊತ್ತ ಕಂಪನಿಗಳ ಪರವಕೀಲರು ತ್ವರಿತ ವಿಚಾರಣೆಗೆ ಮನವಿ ಮಾಡಿದರು. ಆದರೆ, ಕರ್ನಾಟಕ ಸರ್ಕಾರದ ಪರ ವಕೀಲರು ಜನವರಿ ಅಥವಾ ಫೆಬ್ರವರಿಯಲ್ಲಿ ವಿಚಾರಣೆ ನಡೆಸಬೇಕು ಎಂದು ನ್ಯಾ.ಪಿನಾಕಿ ಚಂದ್ರ ಘೋಷ್ ನೇತೃತ್ವ ನ್ಯಾಪೀಠದ ಮುಂದೆ ಕೋರಿದರು. ವಾದಿ, ಪ್ರತಿವಾದಿಗಳು ಅಗತ್ಯ ದಾಖಲೆ ಸಲ್ಲಿಸಿ, ಅದಕ್ಕೆ ಪ್ರತಿ ದಾಖಲೆ ಒದಗಿಸುವ ಪ್ರಕ್ರಿಯೆಯನ್ನು ನ.23 ರೊಳಗೆ ಪೂರ್ಣಗೊಳಿಸಿ. ನ.23 ರಂದು ವಿಚಾರಣೆ ಯಾವಾಗ ಆರಂಭವಾಗಬೇಕು ಎಂಬುದನ್ನು ನಿರ್ಧರಿಸೋಣ.
ನಂತರ ವಾರಕ್ಕೆ 3 ದಿನ ವಿಚಾರಣೆ ನಡೆಸಬಹುದು ಎಂದು ಹೇಳಿದ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದರು. ಈಗ ಕರ್ನಾಟಕ ಸರ್ಕಾರದ ಪರ ವಕೀಲ ಬಿ.ವಿ. ಆಚಾರ್ಯ ಅವರಿಗೆ ದುಶ್ಯಂತ ದವೆ ಅವರು ನೆರವಾಗಲಿದ್ದಾರೆ. ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣ ದಲ್ಲಿ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದೆ.
Advertisement