ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಪ್ರತಿಭಟನಾರ್ಥವಾಗಿ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರುವ ಸಾಹಿತಿಗಳನ್ನು ಗುಪ್ತಚರ ಪೊಲೀಸರು ಬೆನ್ನು ಹತ್ತಿದ್ದಾರೆಯೇ?
ಗುಜರಾತ್ ಮೂಲದ ಲೇಖಕ, ಭಾಷಾತಜ್ಞ ಗಣೇಶ್ ದೇವಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಾಪಸ್ ನೀಡಿದ ಮಾರನೇ ದಿನವೇ ಪೊಲೀಸರು ಅವರ ಮನೆಬಾಗಿಲು ತಟ್ಟಿದ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗಣೇಶ್ ದೇವಿ, ``ಮೊದಲಿಗೆ ಗುಪ್ತಚರ ಅಧಿಕಾರಿಯೊಬ್ಬರು ನನಗೆ ಕರೆ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಅಭಿಯಾನ ನಡೆಸಲೆಂದು ಸಾಹಿತಿಗಳು ಪ್ರಶಸ್ತಿ ವಾಪಸ್ ನೀಡುತ್ತಿದ್ದಾರೆಯೇ'' ಎಂದು ಪ್ರಶ್ನಿಸಿದರು.
ನಂತರ, ವಡೋದರಾದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನನ್ನ ಮನೆಗೆ ಬಂದು, ಅವರ ಅಧಿಕೃತ ಗುರುತಿನ ಚೀಟಿ ತೋರಿಸಿ, ``ಪ್ರಶಸ್ತಿ ವಾಪಸ್ ನೀಡುತ್ತಿರುವುದು ಸರ್ಕಾರದ ವಿರುದ್ಧದ ಸಂಘಟಿತ ಚಳವಳಿಯೇ? ಹೌದಾಗಿದ್ದರೆ, ಇದರ ಹಿಂದೆ ಯಾರಿದ್ದಾರೆ'' ಎಂದು ನನ್ನನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ನಾನು, ``ಇದು ಸಂಘಟಿತ ಚಳವಳಿಯೂ ಅಲ್ಲ, ಇದರ ಹಿಂದೆ ಯಾರ ಕೈವಾಡವೂ ಇಲ್ಲ'' ಎಂದೆ. ತದನಂತರ, ಆ ಅಧಿಕಾರಿಯು, ಕೇಂದ್ರ ಗೃಹಇಲಾಖೆಯ ಸೂಚನೆಯ ಮೇರೆಗೆ ನಾನು ಇಂತಹ ಮಾಹಿತಿ ಕಲೆಹಾಕುತ್ತಿದ್ದೇನೆ ಎಂದರು. ಅಕಾಡೆಮಿ ಪ್ರಶಸ್ತಿ ವಾಪಸ್ ನೀಡಿದ ಬೇರೆ ಸಾಹಿತಿಗಳ ಬಳಿಯೂ ಪೊಲೀಸ್ ಅಧಿಕಾರಿಗಳು ಹೋಗಿದ್ದಾರಾ, ಇದೇ ರೀತಿ ಪ್ರಶ್ನಿಸಿದ್ದಾರಾ ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ ಗಣೇಶ್ ದೇವಿ. ಇದೇ ವೇಳೆ ತೆಲಗು ಲೇಖಕ ಎಂ ಭೂಪಾಲ್ ರೆಡ್ಡಿ ಅವರು ಗುರುವಾರ ತಮ್ಮ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಘೋಷಿಸಿದ್ದಾರೆ.
ಅಕಾಡೆಮಿ ಪ್ರಶಸ್ತಿ ವಾಪಸ್: ಇದೇ ವೇಳೆ, ಸಾಹಿತ್ಯ ಅಕಾಡೆಮಿಯು ಲೇಖಕರ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ರಾಜಸ್ಥಾನಿ ಸಾಹಿತಿ ನಂದ ಭಾರದ್ವಾಜ್ ಅವರೂ, ತಮ್ಮ ಅಕಾಡೆಮಿ ಪ್ರಶಸ್ತಿ ವಾಪಸ್ ನೀಡಿದ್ದಾರೆ. 2004ರಲ್ಲಿ ಪಡೆದಿದ್ದ ಪ್ರತೀಕ ಚಿಹ್ನೆ ಮತ್ತು ರು.50 ಸಾವಿರ ನಗದನ್ನು ಅವರು ಹಿಂದಿರುಗಿಸಿದ್ದಾರೆ.
ರಾಜಕೀಯ ಹಗ್ಗಜಗ್ಗಾಟ: ಲೇಖಕರ ಪ್ರಶಸ್ತಿ ವಾಪ್ಸಿಯು ಈಗ ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರ ಹೇಳಿಕೆ ವಿರುದ್ಧ ಕಾಂಗ್ರೆಸ್ ಹರಿಹಾಯ್ದರೆ, ಪ್ರಶಸ್ತಿ ವಾಪ್ಸಿಯು ಕಾಂಗ್ರೆಸ್ಪ್ರೇರಿತ ಎಂದು ಬಿಜೆಪಿ ಆರೋಪಿಸಿದೆ. ಸಾಹಿತಿಗಳ ನಿರ್ಧಾರವು ನಿರ್ಮಿತ ಬಂಡಾಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಜೇಟ್ಲಿ ಹೇಳಿಕೆಯು `ವಿಕೃತ ಮತ್ತು ಸಿನಿಕತನದಿಂದ ಕೂಡಿದ್ದು' ಎಂದಿದೆ. ಇದೇ ವೇಳೆ, ``ಪ್ರಶಸ್ತಿ ವಾಪಸ್ ನೀಡಿದವರೆಲ್ಲ ಮೋದಿ ವಿರೋಧಿಗಳು'' ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರೆ, ``ಸರ್ಕಾರದ್ದು ಅಪ್ರಾಮಾಣಿಕ, ಸೂಕ್ಷ್ಮತೆಯಿಲ್ಲದ, ಕಾಳಜಿಯಿಲ್ಲದ ವರ್ತನೆ'' ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಲೇಖಕರ ಜ್ಞಾನ, ಸೃಜನಶೀಲತೆ ಆಧರಿಸಿ ಪ್ರಶಸ್ತಿ ನೀಡಲಾಗುತ್ತದೆ. ಲೇಖಕರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಸರಿ... ಆದರೆ, ಪ್ರಶಸ್ತಿಗೆ ಅಗೌರವ ಕೊಡುವುದು ಸರಿಯಲ್ಲ.
- ಶಶಿ ತರೂರ್ ಕಾಂಗ್ರೆಸ್ ಸಂಸದ
Advertisement