ಮದುವೆ
ಮದುವೆ

ಮದುವೆ ಆಮಿಷವೊಡ್ಡಿ ಮಹಿಳೆಯಿಂದ 1 ಕೋಟಿ ವಂಚಿಸಿದ ವಿದೇಶಿಗರ ಬಂಧನ

ವಿದೇಶಿಗರಿಬ್ಬರು ಮದುವೆ ಆಮಿಷವೊಡ್ಡಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಮಹಿಳೆಯೊಬ್ಬರಿಂದ 1 ಕೋಟಿ ರು. ವಂಚನೆ ಮಾಡಿರುವ ಘಟನೆ ನಡೆದಿದೆ...
ಮುಂಬೈ: ವಿದೇಶಿಗರಿಬ್ಬರು ಮದುವೆ ಆಮಿಷವೊಡ್ಡಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಮಹಿಳೆಯೊಬ್ಬರಿಂದ 1 ಕೋಟಿ ರು. ವಂಚನೆ ಮಾಡಿರುವ ಘಟನೆ ನಡೆದಿದೆ. 
ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ನಕಲಿ ಪ್ರೊಫೈಲ್‌ ತಯಾರಿಸಿದ ಆರೋಪಿ, ನಾನು ವಿದೇಶಿಗ ಎಂದು ಹೇಳಿಕೊಂಡು ಎಂಟರ್‌ಟೈನ್‌ಮೆಂಟ್‌ ಕಂಪೆನಿಯೊಂದರ 45 ವಯಸ್ಸಿನ ಮಹಿಳಾ ಮುಖ್ಯಾಧಿಕಾರಿಯೊಬ್ಬರನ್ನು ಮದುವೆಯಾಗುವುದಾಗಿ ಆಮಿಷವೊಡ್ಡಿ ಯಾಮಾರಿಸಿದ್ದಾನೆ. ನನಗೆ ಬ್ಯುಸಿನೆಸ್‌ಗಾಗಿ ಹಣದ ಆವಶ್ಯಕತೆ ಇದೆ ಎಂದು ಹೇಳಿ ಅವಳಿಂದ ಇದುವರೆಗೆ 1 ಕೋಟಿ ರು.ಗಿಂತ ಅಧಿಕ ಹಣ ವಸೂಲಿ ಮಾಡಿ ಆಕೆಗೆ ವಂಚಿಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಮಾಲ್ವಣಿ ಉಪ ನಗರದಿಂದ ಇಬ್ಬರು ನೈಜೀರಿಯಾ ಪ್ರಜೆಗಳಾದ 30 ವರ್ಷದ ಓಜೋನೆವರುಪಕ್ ಮತ್ತು 29 ವರ್ಷದ ಐಫಾನಿ ಒಡೋಹ್ ರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು 10 ಮೊಬೈಲ್‌, 19 ಸಿಮ್‌ ಕಾರ್ಡ್‌(13-ವಿದೇಶಿ, 3-ದೇಶಿ)ಗಳು, 4 ಲ್ಯಾಪ್‌ಟಾಪ್‌, ಡೆಟಾಕಾರ್ಡ್‌ ಮತ್ತು ನಕಲಿ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ತನ್ನ ಮದುವೆ ವಿಷಯವಾಗಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಮಹಿಳೆಗೆ ಓರ್ವ ವಿದೇಶಿ ವ್ಯಕ್ತಿಯ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿ, ವಿಷಯ ಮದುವೆವರೆಗೂ ಹೋಯಿತು. ತಂದೆಯ ಕ್ಯಾನ್ಸರ್‌ ರೋಗದ ಔಷಧಿಗಳು ಭಾರತದಲ್ಲಿ ತುಟ್ಟಿಯಾಗಿ ದೊರೆಯುತ್ತವೆ. ಅಲ್ಲದೆ, ನನಗೆ ಬ್ಯುಸಿನೆಸ್‌ಗಾಗಿ ಹಣದ ಆವಶ್ಯಕತೆ ಇದೆ. ಭಾರತಕ್ಕೆ ಬಂದ ಕೂಡಲೇ ನಿನ್ನ ಹಣ ಹಿಂದಿರುಗಿಸುವೆ ಎಂದು ಹೇಳಿ ಆರೋಪಿ ತನ್ನ ಸಹಚರನೊಂದಿಗೆ ಜತೆಗೂಡಿ ಮಹಿಳೆಯನ್ನು ವಂಚಿಸಿದ್ದಾನೆ.
2009ರಲ್ಲಿ ನೈಜೀರಿಯಾದಿಂದ ಮುಂಬಯಿಗೆ ಬಂದಿದ್ದಾರೆ. ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಸುಳ್ಳು-ನಕಲಿ ಪ್ರೊಫೈಲ್‌ ತಯಾರಿಸಿ ಇವರು ಇದುವರೆಗೆ ಸುಮಾರು 12 ಮಹಿಳೆಯರಿಗೆ ಕೋಟಿಗಟ್ಟಲೆ ರೂಪಾಯಿಗಳ ವಂಚಿಸಿದ್ದಾರೆ ಎಂದು ಸಹಾಯಕ ಪೊಲೀಸ್‌ ಆಯುಕ್ತ ಅತುಲ್‌ ಚಂದ್ರ ಕುಲಕರ್ಣಿ ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com