ಮಸಿ ಘಟನೆ ಪಾಕಿಸ್ತಾನದ ಮೇಲೆ ಪರಿಣಾಮ ಬೀರಿದೆ: ಸುಧೀಂದ್ರ ಕುಲಕರ್ಣಿ

ಶಿವಸೇನೆಯ ಕಾರ್ಯಕರ್ತರು ಮಸಿ ಬಳಿದದ್ದು ತಮ್ಮ ಮುಖಕ್ಕೆ ಅಲ್ಲ, ಅದು ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಭಾರತೀಯರ ಸಹಿಷ್ಣುತೆಗೆ ಬಳಿದ ಮಸಿ ಎಂದು ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.
ಸುಧೀಂದ್ರ ಕುಲಕರ್ಣಿ(ಸಂಗ್ರಹ ಚಿತ್ರ)
ಸುಧೀಂದ್ರ ಕುಲಕರ್ಣಿ(ಸಂಗ್ರಹ ಚಿತ್ರ)

ಮಣಿಪಾಲ: ಮುಂಬೈಯಲ್ಲಿ ಶಿವಸೇನೆಯ ಕಾರ್ಯಕರ್ತರು ಮಸಿ ಬಳಿದದ್ದು ತಮ್ಮ ಮುಖಕ್ಕೆ ಅಲ್ಲ, ಅದು ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಭಾರತೀಯರ ಸಹಿಷ್ಣುತೆಗೆ ಬಳಿದ ಮಸಿ ಎಂದು ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂಬೈ ಕಾರ್ಯಕ್ರದ ಮೊದಲು ಖುದ್ದು ಶಿವಸೇನೆಯ ಕಾರ್ಯಕರ್ತರೊಂದಿಗೆ ಮಾತನಾಡಿದ್ದೆ. ನಮ್ಮ ಕಾರ್ಯಕ್ರಮವನ್ನು ಅವರು ವಿರೋಧಿಸಿದ್ದರು. ನಾನು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅವರಿಗೆ ಮನವರಿಕೆ ಮಾಡಲೆತ್ನಿಸಿದ್ದೆ. ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುವುದು ಅವರ ಹಕ್ಕು, ಅದನ್ನು ನಾನು ಗೌರವಿಸುವುದಾಗಿಯೂ ಹೇಳಿದ್ದೆ. ಆದರೆ ಅವರಿಗೆ ಅದು ಇಷ್ಟವಾಗಲಿಲ್ಲ. ಆದ್ದರಿಂದ ಆ ಘಟನೆ ನಡೆಯಿತು. ಅದಕ್ಕೆ ಇಡೀ ದೇಶವೇ ಪ್ರತಿಕ್ರಿಯೆ ನೀಡಿದೆ"  ಎಂದು ಅಂದಿನ ಘಟನೆಯನ್ನು ವಿವರಿಸಿದರು.
ಈ ಘಟನೆಗೆ ಭಾರತೀಯರು ನೀಡಿದ ಪ್ರತಿಕ್ರಿಯೆಯಿಂದ ಒಳ್ಳೆಯದೇ ಆಯಿತು. ಅದು ಪಾಕಿಸ್ತಾನದ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರಿದೆ. ಅಲ್ಲಿಯೂ ಭಾರತದ ಜೊತೆಗೆ ಸ್ನೇಹ ಸೌಹಾರ್ದವನ್ನು ಬಯಸುವವರಿದ್ದಾರೆ. ಇದು ಎರಡೂ ದೇಶಗಳ ನಡುವಿನ ಸೌಹಾರ್ದಕ್ಕೆ ಮುಂದೆ ಕಾರಣವಾಗುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ ಸಿಂಗ್ ಇಬ್ಬರೂ ಸೌಹಾರ್ದ ಮಾತುಕತೆ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಹಾಲಿ ಪ್ರಧಾನಿ ಮೋದಿ ಅವರೂ ಮಾತುಕತೆಯ ಮೂಲಕವೇ ಈ ಪ್ರಯತ್ನವನ್ನು ಮುಂದುವರಿಸಿಕೊಂಡು ಹೋಗಬೇಕು. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಸಾರ್ಕ್ ಸಮ್ಮೇಳನದಲ್ಲಿ ಮೋದಿ ಅವರು ಭಾಗವಹಿಸಬೇಕು ಎಂದು ಹೇಳಿದರು.
ದಾವೂದ್‍ನನ್ನು ಭಾರತಕ್ಕೊಪ್ಪಿಸಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿರುವುದು ಇಡೀ ವಿಶ್ವಕ್ಕೆ ಗೊತ್ತು, ಹಾಗಿರುವಾಗ ಪಾಕಿಸ್ತಾನ ತನಗೆ ಗೊತ್ತಿಲ್ಲ ಎನ್ನುವುದು ಸುಳ್ಳು. ಆತನಿಂದ ಪಾಕಿಸ್ತಾನಕ್ಕೆ ಯಾವುದೇ ಲಾಭ ಇಲ್ಲ. ಆತ ಭಾರತಕ್ಕೆ ಬೇಕಾಗಿರುವ ವ್ಯಕ್ತಿ. ಆತನನ್ನು ಖುದ್ದು ಪಾಕಿಸ್ತಾನವೇ ಭಾರತಕ್ಕೆ ಒಪ್ಪಿಸಬೇಕು. ಇದರಿಂದ ಸೌಹಾರ್ದ ಸಂಬಂಧಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಕುಲಕರ್ಣಿ ಅಭಿಪ್ರಾಯಪಟ್ಟರು.
ಡಿಜಿಟಲ್ ಇಂಡಿಯಾಗೆ ಬೆಂಬಲ: ದೇಶವನ್ನು ಕೇವಲ ಹಸಿವು ಮುಕ್ತ ಮಾಡಿದರೆ ಸಾಲದು, ಪ್ರತಿಯೊಬ್ಬರ ನಡುವೆ ಸಂಪರ್ಕವೂ ಆಗತ್ಯವಾಗಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ಡಿಜಿಟಲ್ ಇಂಡಿಯಾವನ್ನು ಬೆಂಬಲಿಸುವುದಾಗಿ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ. ಈ ಹಿಂದೆ ಬಟ್ಟೆ ವಸತಿ ಆಹಾರವಷ್ಟೇ ಮನುಷ್ಯನ ಮೂಲಭೂತ ಅಗತ್ಯವಾಗಿತ್ತು. ಅಷ್ಟರಲ್ಲೇ ಆತ ಸಂತೃಪ್ತನಾಗಿದ್ದ, ಆದರೆ, ಇಂದು ಸಂಪರ್ಕ ಕೂಡ ಆತನ ಅಗತ್ಯವಾಗಿದೆ. ಅದಿಲ್ಲದೇ ಜೀವನ ಸಾಧ್ಯವಿಲ್ಲವಾಗಿದೆ ಎಂದು ಅಭಿಪ್ರಾಯಪಟ್ಟರು. ಹಿಂದೆ ಸಮೂಹ ಮಾಧ್ಯಮ ಸಮೂಹವನ್ನು
ತಲುಪುತ್ತಿರಲಿಲ್ಲ. ಆದರೆ, ಇಂದು ಅಂತರ್ಜಾಲದಿಂದಾಗಿ ಸಮೂಹ ಮಾಧ್ಯಮವು ನಿಜವಾದ ಸಮೂಹವನ್ನು ತಲುಪುತ್ತಿದೆ. ಮತ್ತು ನಿಜವಾದ ಅರ್ಥದಲ್ಲಿ ಅದು ದೇಶ- ಭಾಷೆಯ ಗಡಿಯನ್ನು ಮೀರಿ ಸಮೂಹದ ಮಾಧ್ಯಮವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com