ದಲಿತ ಮಕ್ಕಳ ಸಜೀವ ದಹನ ಪ್ರಕರಣ: 7 ಪೊಲೀಸರ ಅಮಾನತು

ಇಬ್ಬರು ದಲಿತ ಮಕ್ಕಳನ್ನು ಜೀವಂತವಾಗಿ ದಹನ ಮಾಡಿರುವ ಪ್ರಕರಣ ಸಂಬಂಧ ಏಳು ಪೊಲೀಸರನ್ನು ಅಮಾನತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಫರೀದಾಬಾದ್: ಇಬ್ಬರು ದಲಿತ ಮಕ್ಕಳನ್ನು ಜೀವಂತವಾಗಿ ದಹನ ಮಾಡಿರುವ ಪ್ರಕರಣ ಸಂಬಂಧ ಏಳು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಪೊಲೀಸರನ್ನು ವರ್ಷದ ಹಿಂದೆ ದಲಿತರ ರಕ್ಷಣೆಗೆಂದು ನಿಯೋಜಿಸಲಾಗಿತ್ತು. ಆದರೆ, ರಕ್ಷಣೆ ನೀಡುವಲ್ಲಿ ಇವರು ವಿಫಲರಾದ ಹಿನ್ನಲೆಯಲ್ಲಿ ಅಮಾನತುಗೊಳಿಸಿರುವ ಆದೇಶ ಹೊರಡಸಲಾಗಿದೆ. 
ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು. ನಿನ್ನೆ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟಾರ್ ಅವರಿಗೆ ಕರೆ ಮಾಡಿ ಪ್ರಕರಣ ಸಂಬಂಧ ಪೂರ್ಣ ವರದಿ ನೀಡುವಂತೆ ಹೇಳಿದ್ದು, ದಲಿತರಿಗೆ ಸೂಕ್ತ ಭದ್ರತೆ ನೀಡುವಂತೆ ಸೂಚಿಸಿದ್ದರು. ಹರ್ಯಾಣ ಸರಕಾರ ಸಂತ್ರಸ್ತ ದಲಿತ ಕುಟುಂಬಕ್ಕೆ ರುಪಾಯಿ 10 ಲಕ್ಷ ಪರಿಹಾರ ಘೋಷಿಸಿದೆ.
ದಲಿತ ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಗುಡಿಸಲಿನಲ್ಲಿ ಮಲಗಿದ್ದ ಸಮಯದಲ್ಲಿ ಮೇಲು ಜಾತಿಗೆ ಒಳಪಟ್ಟ ಗುಂಪೊಂದು ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮಕ್ಕಳಿಬ್ಬರು ಮೃತಪಟ್ಟಿದ್ದು, ಗಾಯಗೊಂಡ ಪೋಷಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೀತೇಂದ್ರ ಎಂಬುವವರ ಗುಡಿಸಲಿಗೆ ಬೆಂಕಿ ಹಚ್ಚಿಲಾಗಿತ್ತು. ಜೀತೇಂದ್ರ ಪತ್ನಿಗೆ ಶೇ.70ರಷ್ಟು ಸುಟ್ಟು ಹೋಗಿದ್ದು, ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೂವರೆ ವರ್ಷದ ಪುತ್ರ ವೈಭವ್ ಹಾಗೂ 11 ತಿಂಗಳ ಪುತ್ರಿ ದಿವ್ಯ ಸಾವನ್ನಪ್ಪಿದ್ದರು. 
“ಕಿಟಕಿಯ ಮೂಲಕ ಅವರು ಪೆಟ್ರೋಲ್ ಸುರಿದಾಗ ನಾವು ಮಲಗಿದ್ದೆವು. ನನಗೆ ಪೆಟ್ರೋಲ್ ವಾಸನೆ ಬಂದಿದ್ದು, ನನ್ನ ಪತ್ನಿಯನ್ನು ಎಬ್ಬಿಸಲು ಪ್ರಯತ್ನಿಸಿದೆ. ಆದರೆ, ಅಷ್ಟು ಹೊತ್ತಿಗೆ ಅವರು ಬೆಂಕಿ ಹಚ್ಚಿ ಆಗಿತ್ತು” ಎಂದು ಬೆಂಕಿಗೆ ಸಿಲುಕಿ ಸುಟ್ಟ ಗಾಯಗಳೊಂದಿಗೆ ಪಾರಾಗಿರುವ 31 ವರ್ಷದ ಜಿತೇಂದ್ರ ಹೇಳುತ್ತಾರೆ.
ಘಟನೆಗೆ ಸಂಬಂಧಿಸಿದಂತೆ 11 ಜನರ ಮೇಲೆ ಪ್ರಕರಣ ದಾಖಲಾಗಿದೆ. ಮೂವರನ್ನು ಆ ತಕ್ಷಣ ಬಂಧಿಸಲಾಗಿದ್ದು, ಉಳಿದ ಎಂಟು ಮಂದಿ ತಲೆಮರೆಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com