
ನವದೆಹಲಿ: ಐಪಿಎಲ್ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಲಲಿತ್ ಮೋದಿಯನ್ನು ಬ್ರಿಟನ್‍ನಿಂದ ಗಡಿಪಾರು ಮಾಡಲು ಹಿಂದಿನ ಯುಪಿಎ ಸರ್ಕಾರ ಪ್ರಯತ್ನಿಸಿತ್ತು. ಈ ಬಗ್ಗೆ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ 2013ರ ಆಗಸ್ಟ್ ನಲ್ಲಿ ಪತ್ರ ಬರೆದಿದ್ದ ಬಗ್ಗೆ `ಎನ್‍ಡಿಟಿವಿ' ವರದಿ ಮಾಡಿದೆ.
ಚಿದಂಬರಂ ಅವರು ಈ ಹಿಂದೆಯೇ ತಾವು ಬ್ರಿಟನ್ ಸರ್ಕಾರಕ್ಕೆ ಬರೆದಿರುವ ಪತ್ರವನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು. ಈಗ ಆ ಪತ್ರವನ್ನು ಸುದ್ದಿವಾಹಿನಿಯೇ ಬಹಿರಂಗ ಮಾಡಿದೆ. ``ಕೇಂದ್ರ ಸರ್ಕಾರ ಲಲಿತ್ ಮೋದಿಯನ್ನು ಹಸ್ತಾಂತರ ಮಾಡಿ ಎಂದು ಕೇಳುತ್ತಿಲ್ಲ. ಅದರ ಬದಲಿಗೆ ಅವರನ್ನು ಗಡಿಪಾರು ಮಾಡಬೇಕು. ಏಕೆಂದರೆ ಈಗಾಗಲೇ ಭಾರತ ಸರ್ಕಾರ ಲಲಿತ್ ಪಾಸ್‍ಪೋರ್ಟ್ ಅನ್ನು ರದ್ದು ಮಾಡಿದೆ. ಇದರ ಜತೆಗೆ ಲಲಿತ್ ಮೋದಿ ಬಳಿ ಯಾವುದೇ ಅಧಿಕೃತ ದಾಖಲೆಗಳು ಇಲ್ಲ ಎಂದು ಕೇಂದ್ರ ಸರ್ಕಾರ ಭಾವಿಸುತ್ತಿದೆ'' ಎಂದು ಚಿದಂಬರಂ ಪತ್ರದಲ್ಲಿ ಬರೆದಿದ್ದರು.
ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತದೆ. ಹೀಗಾಗಿ ಅವರನ್ನು ಗಡಿಪಾರು ಮಾಡಿ ಎಂದು ಮನವಿ ಮಾಡಿದ್ದರು. ಅದಕ್ಕೆ 2013ರ ಸೆ.23ರಂದು ಮಾರೋಲೆ ಬರೆದಿದ್ದ ಬ್ರಿಟನ್‍ನ ವಿದೇಶಾಂಗ ಇಲಾಖೆ ``ಭಾರತ ಸರ್ಕಾರ ಲಲಿತ್ ಮೋದಿ ಪ್ರಕರಣದಲ್ಲಿ ತೋರಿಸುತ್ತಿ ರುವ ಆಸಕ್ತಿಯನ್ನು ಕೊಂಡಾಡುತ್ತದೆ. ಆದರೆ ಹಸ್ತಾಂತರದ ಬಗ್ಗೆ ಸೂಕ್ತ ಮಾರ್ಗದ ಮೂಲಕ ಮನವಿ ಸಲ್ಲಿಸಿದಲ್ಲಿ ಅದನ್ನು ಪರಿಗಣಿಸಲಾಗುತ್ತದೆ''ಎಂದು ಬರೆದಿತ್ತು.
ಇದೇ ಸಾಕ್ಷಿ: ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ``ಯುಪಿಎ ಸರ್ಕಾರ ಲಲಿತ್ ಮೋದಿಯನ್ನು ಗಡಿಪಾರು ಮಾಡಲು ಪ್ರಯತ್ನಿಸಿತ್ತು ಎನ್ನುವುದಕ್ಕೆ ಇದುವೇ ಸಾಕ್ಷಿ'' ಎಂದಿದ್ದಾರೆ.
Advertisement