'ನಿತೀಶ್ ಜಿಂದಾಬಾದ್', 'ಲಾಲು ಮುರ್ದಾಬಾದ್‌'

ಬಿಹಾರ ವಿಧಾನಸಭೆ ಚುನಾವಣೆ ಪ್ರತಿನಿತ್ಯ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಮುಖ್ಯಮಂತ್ರಿ...
ತಾಂತ್ರಿಕ್ ನನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿ ಮಾಡಿದ್ದ ಸಂದರ್ಭ
ತಾಂತ್ರಿಕ್ ನನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿ ಮಾಡಿದ್ದ ಸಂದರ್ಭ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಪ್ರತಿನಿತ್ಯ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಸದೊಂದು ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅದೇನೆಂದರೆ ನಿತೀಶ್ ಕುಮಾರ್ ಅವರು ತಾಂತ್ರಿಕ್ ಒಬ್ಬರನ್ನು ಭೇಟಿಯಾಗಿದ್ದು ಅದಕ್ಕೆ ಸಂಬಂಧಿಸಿದ ವಿಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಭಾರೀ ಇರಿಸುಮುರಿಸು ಉಂಟುಮಾಡುವಂತಿದ್ದು, ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದೆ. ಅದರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಗ್ಗದ ಮಂಚದಲ್ಲಿ ತಾಂತ್ರಿಕ್ ಎದುರಲ್ಲಿ ಕುಳಿತುಕೊಂಡಿದ್ದಾರೆ. ಅಲ್ಲಿ ಜೆಡಿಯು ನಾಯಕ ನೀರಜ್ ಕುಮಾರ್ ಕೂಡ ಇದ್ದಾರೆ. ವಿಡಿಯೋದಲ್ಲಿ ಇಬ್ಬರ ನಡುವಿನ ಸಂಭಾಷಣೆಯ ಧ್ವನಿ ಕೇಳಿಬರುತ್ತಿಲ್ಲ. ವಿಡಿಯೋದ ಸೌಂಡ್ ನ್ನು ಮ್ಯೂಟ್ ಮಾಡಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ಕೇಳಿಸುತ್ತಿದ್ದು, ಅಲ್ಲಿ ತಾಂತ್ರಿಕ್ ನಿತೀಶ್ ಬಳಿ, ಯಾಕೆ ನೀನು ಆರ್ ಜೆಡಿ ಮುಖ್ಯಸ್ಥ ಲಾಲೂ ಜೊತೆ ಕೈ ಜೋಡಿಸಿದ್ದಿ ಎಂದು ಕೇಳಿ ನಿತೀಶ್ ಜಿಂದಾಬಾದ್, ಲಾಲೂ ಮುರ್ದಾಬಾದ್ ಎಂದು ಉಚ್ಛರಿಸುತ್ತಾನೆ. ನಂತರ ಲಾಲೂವನ್ನು ತಬ್ಬಿ ಮುತ್ತಿಕ್ಕುತ್ತಿರುವ ದೃಶ್ಯವಿದೆ.

ನಿತೀಶ್ ಕುಮಾರ್ ವಿರುದ್ಧ ದೋಷಾರೋಪ ಮಾಡಲು ಕಾಯುತ್ತಿರುವ ಬಿಜೆಪಿಗೆ ಇಷ್ಟು ಸಿಕ್ಕಿದ್ದು ಸಾಕಾಗಿದೆ. ಕೇಂದ್ರ ಸಚಿವ ಬಿಜೆಪಿಯ ಗಿರಿರಾಜ್ ಸಿಂಗ್ ಆರೋಪಿಸಿ ಲಾಲೂ ಪ್ರಸಾದ್ ಅವರನ್ನು ಸೋಲಿಸಲು ನಿತೀಶ್ ಕುಮಾರ್ ತಾಂತ್ರಿಕ್ ನನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿ, ಪರಿಸ್ಥಿತಿ ಕೆಟ್ಟದಿರುವಾಗ ಯಾವ ತಂತ್ರ-ಮಂತ್ರ ಕೂಡ ನಡೆಯುವುದಿಲ್ಲ, ಬಿಜೆಪಿ ನಾಯಕರು ಕೂಡ ಬಾಬಾರನ್ನು ಭೇಟಿ ಮಾಡುತ್ತಾರೆ, ಆದರೆ ಇಲ್ಲಿ ಮೈತ್ರಿ ಮಾಡಿಕೊಂಡಿರುವ ಲಾಲೂ ವಿರುದ್ಧವೇ ಸಂಚು ರೂಪಿಸಲು ನಿತೀಶ್ ಕುಮಾರ್ ಬಾಬಾರನ್ನು ಭೇಟಿ ಮಾಡಿರುವುದು ವಿಪರ್ಯಾಸ ಎಂದರು.
ಈ ಬಗ್ಗೆ ಲಾಲೂ ಪ್ರಸಾದ್ ಯಾದವ್ ಅವರನ್ನು ಕೇಳಿದಾಗ, ನನಗೆ ವಿಡಿಯೋ ಗಮನಕ್ಕೆ ಬಂದಿಲ್ಲ. ಈ ಎಲ್ಲಾ ತಾಂತ್ರಿಕರಿಗಿಂತ ನಾನು ದೊಡ್ಡ ತಾಂತ್ರಿಕ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ದಿನಾಂಕವಿಲ್ಲದ ಈ ವಿಡಿಯೋ ಚಿತ್ರಿಕೆಯನ್ನು ಯೂಟ್ಯೂಬ್‌ನಲ್ಲಿ ಬಿಜೆಪಿಯ ವಿವಾದಾತ್ಮಕ ನಾಯಕ ಗಿರಿರಾಜ್‌ ಸಿಂಗ್‌ ಅವರು ಹಂಚಿಕೊಂಡಿದ್ದಾರೆ. ಬಿಜೆಪಿ ನಾಯಕ ಸುಶಿಲ್ ಕುಮಾರ್ ಮೋದಿ ಪ್ರತಿಕ್ರಿಯೆ ನೀಡಿ, ಈಗಾಗಲೇ ಎರಡು ಸುತ್ತಿನ ಚುನಾವಣೆಯಲ್ಲಿ ಸೋಲುವ ಭೀತಿ ನಿತೀಶ್ ಅವರಿಗೆ ಎದುರಾಗಿದೆ.ಹಾಗಾಗಿ ತಂತ್ರ-ಮಂತ್ರಗಳ ಮೊರೆ ಹೋಗುತ್ತಿದ್ದಾರೆ ಎಂದರು. ಬಿಹಾರ ಮಾಜಿ ಮುಖ್ಯಮಂತ್ರಿ ಹಿಂದೂಸ್ತಾನ್ ಅವಮ್ ಮೋರ್ಚಾದ ಮುಖ್ಯಸ್ಥ ಜಿತನ್ ರಾಮ್ ಮಂಜಿ ಅವರು ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ, ತಾವು ಸಮಾಜವಾದಿ ಎಂದು ಹೇಳುವ ನಿತೀಶ್ ಅವರು ತಾಂತ್ರಿಕರನ್ನು ಭೇಟಿ ಮಾಡಿ ಮೂಢನಂಬಿಕೆಯನ್ನು ಪ್ರೋತ್ಸಾಹಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com