ವಿಶ್ವಸಂಸ್ಥೆ ಭದ್ರತಾ ಮಂಡಳಿ: ಭಾರತದ ಖಾಯಂ ಸದಸ್ಯ ಸ್ಥಾನದ ಹಾದಿ ಸುಗಮ

ಭಾರತದ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನ ಪಡೆಯುವ ಭಾರತದ ಅಭಿಲಾಶೆಗೆ ಆಫ್ರಿಕಾ ಕೈಜೋಡಿಸಿದೆ...
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)

ನವದೆಹಲಿ: ಭಾರತದ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನ ಪಡೆಯುವ ಭಾರತದ ಅಭಿಲಾಶೆಗೆ ಆಫ್ರಿಕಾ  ಕೈಜೋಡಿಸಿದೆ.

ಮೂಲಗಳ ಪ್ರಕಾರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಆಫ್ರಿಕಾ ಮತ್ತು ಭಾರತ ಶೃಂಗ ಸಭೆಯಲ್ಲಿ ಆಫ್ರಿಕಾದ ಅಧಿಕಾರಿಗಳು ಈ ಬಗ್ಗೆ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು  ತಿಳಿದುಬಂದಿದೆ. ಭಾರತ ಮತ್ತು ಆಫ್ರಿಕಾದ ಸುಮಾರು 2.5 ಬಿಲಿಯನ್ ಸದಸ್ಯರು ಬೆಂಬಲ ಸೂಚಿಸುತ್ತಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ವಿಶ್ವಸಂಸ್ಥೆಗೆ ವರದಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ಆಫ್ರಿಕಾ ಮತ್ತು ಭಾರತ ಶೃಂಗ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು, ವಿಶ್ವಸಂಸ್ಥೆ ಭದ್ರತಾ  ಮಂಡಳಿಯಲ್ಲಿನ ಖಾಯಂ ಸದಸ್ಯ ಸ್ಥಾನಕ್ಕಾಗಿ ಭಾರತ ಮತ್ತು ಆಫ್ರಿಕಾ ದೇಶಗಳು ಹೆಚ್ಚು ಸಮಯ ಕಾಯುವ ಅಗತ್ಯವಿಲ್ಲ. ವಿಶ್ವಸಂಸ್ಥೆಯ 70ನೇ ಸಾಮಾನ್ಯ ಸಭೆ ನಮಗೆ ಉತ್ತಮ  ಅವಕಾಶವಾಗಿದ್ದು, ಈ ವೇಳೆ ಉಭಯ ದೇಶಗಳ ದಶಕಗಳ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ನಾವು ಶಾಶ್ವತ ಕಾರ್ಯ ಕೈಗೊಳ್ಳಬೇಕಿದೆ ಎಂದು ಹೇಳಿದರು.

"ಭಯೋತ್ಪಾದನೆ ಎಂಬ ಭೂತ ಉಭಯ ದೇಶಗಳನ್ನು ದಶಕಗಳಿಂದ ಪೀಡಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ನೀಡಬೇಕಿದೆ. ಹೀಗಾಗಿ ಭದ್ರತಾ ಮಂಡಳಿಯಲ್ಲಿನ ಖಾಯಂ ಸದಸ್ಯ ಸ್ಥಾನಕ್ಕೆ  ನಾವು ಅರ್ಹರು.  ಗುಪ್ತಚರ ಹಂಚಿಕೆ, ತರಬೇತಿ ಮತ್ತು ಭಯೋತ್ಪಾದನೆ ಸಮಸ್ಯೆಯಂತಹ ಇತರೆ ಸಮಸ್ಯೆಗಳನ್ನು ಎದುರಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಬದಲಾಗುತ್ತಿರುವ ತಂತ್ರಜ್ಞಾನದ  ಪ್ರಯೋಜನವನ್ನು ಭಯೋತ್ಪಾದಕರೂ ಬಳಸುತ್ತಿದ್ದು, ಅವರನ್ನು ಎದುರಿಸುವ ನಿಟ್ಟಿನಲ್ಲಿ ನಾವು ಸಿದ್ಧರಾಗಬೇಕಿದೆ" ಎಂದು ಕೇಂದ್ರ ವಿದೇಶಾಂಗ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com