
ನವದೆಹಲಿ: ವೇದಕಾಲೀನ ಹಿಂದೂಗಳು ಗೋಮಾಂಸ ಸೇವಿಸುತ್ತಿದ್ದರು ಹಾಗೂ ಗೋಮಾಂಸಕ್ಕಾಗಿ ಗೋವುಗಳನ್ನು ಹತ್ಯೆ ಮಾಡುತ್ತಿದ್ದರೆಂಬ ಬ್ರಿಟೀಷ್ ಕಾಲದ ಬರಹಗಳನ್ನು ಆರ್ ಎಸ್ಎಸ್ ಮಂಗಳವಾರ ವಿರೋಧಿಸಿದ್ದು, ಭಾರತೀಯ ಇತಿಹಾಸವನ್ನು ತಿರುಚಿ ಬರೆಯಲು ಬ್ರಿಟೀಷರು ಬರಹಗಾರರಿಗೆ ಆಮಿಷವೊಡ್ಡಿದ್ದರು ಎಂದು ಮರು ಆರೋಪ ಮಾಡಿದೆ.
ಈ ಕುರಿತಂತೆ ತನ್ನ ಮುಖಪುಟ ಮ್ಯಾಗಜಿನ್ 'ಆರ್ಗನೈಸರ್' ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಆರ್ ಎಸ್ಎಸ್, ವೇದಗಳು ಗೋಮಾಂಸ ಸೇವನೆಗೆ ಸಮ್ಮತಿ ನೀಡಿದೆ ಎಂಬ ಮಾತು ಹಾಗೂ ಬರಹಗಳಲ್ಲಿ ಸತ್ಯಾಂಶವಿಲ್ಲ. ಸಂಸ್ಕೃತ ಬಹಳ ಶ್ರೀಮಂತ ಭಾಷೆಯಾಗಿದ್ದು, ಒಂದು ಪದದಲ್ಲಿಯೇ ಹಲವಾರು ಅರ್ಥಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಆಗಿನ ಬರಹಗಾರರು ವೇದದ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಭಾರತೀಯ ಇತಿಹಾಸವನ್ನು ತಿರುಚಿ ಬರೆದಿದ್ದಾರೆ ಎಂದು ಹೇಳಿಕೊಂಡಿದೆ.
ಇದೇ ವೇಳೆ ಬ್ರಿಟೀಷ್ ಆಡಳಿತ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಆರ್ ಎಸ್ ಎಸ್, ಬ್ರಿಟೀಷರು ಭಾರತದ ಇತಿಹಾಸವನ್ನು ತಿರುಚುವ ಸಲುವಾಗಿ ಬರಹಗಾರರಿಗೆ ಆಮಿಷ ಒಡ್ಡಿದ್ದರು. ಹೀಗಾಗಿ ಬರಹಗಾರರು ಇತಿಹಾಸವನ್ನೇ ತಿರುಚಿ ಬರೆದಿದ್ದಾರೆ. 1857ರಲ್ಲಿ ಹಸುಗಳ ಮತ್ತು ಹಂದಿಗಳ ಕೊಬ್ಬನ್ನು ಬ್ರಿಟೀಷ್ ಸರ್ಕಾರ ಸಿಡಿಮದ್ದುಗಳಲ್ಲಿ ಉಪಯೋಗಿಸುತ್ತಿದ್ದುದರ ವಿರುದ್ಧ ಭಾರತೀಯ ಸೇನೆಯಲ್ಲಿದ್ದ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಬಂಡಾಯವೆದ್ದಿದ್ದರು. ಇದಾದ ಬಳಿಕ ವೇದ ಮತ್ತು ಗೋವುಗಳ ವಿಚಾರದಲ್ಲಿ ಭಾರತೀಯರ ನಂಬಿಕೆಗಳಿಗೆ ಧಕ್ಕೆಯುಂಟು ಮಾಡಲು ಬ್ರಿಟೀಷ್ ಸರ್ಕಾರ ಸಾಕಷ್ಟು ಯತ್ನ ನಡೆಸಿತ್ತು.
ಹೀಗಾಗಿ ತನ್ನ ಯೋಜನೆಯಂತೆ ವೇದಗಳಲ್ಲಿ ಗೋಮಾಂಸ ಸೇವನೆ ಕುರಿತಾದ ಸಾಕ್ಷಿ ಸಂಗ್ರಹಿಸಲು ಯೂರೋಪ್ ಮತ್ತು ಭಾರತದ ವಿಧ್ವಾಂಸರನ್ನು ನೇಮಿಸಿತ್ತು. ಕೋಲ್ಕತಾದ ವ್ಯಾಕರಣ ಪಂಡಿತ ತಾರಾನಾತ್ ಅವರು ತಮ್ಮ ಪುಸ್ತಕದಲ್ಲಿ ವೇದಕಾಲೀನ ಹಿಂದೂಗಳನ್ನು ಗೋಹಂತಕರು ಎಂದು ಉಲ್ಲೇಖಿಸಿದ್ದರು. ಇದಕ್ಕಾಗಿ ಬ್ರಿಟೀಷ್ ಸರ್ಕಾರ ಅಂದು ತಾರಾನಾತ್ ಅವರಿಗೆ ಉತ್ತಮ ಸಂಭಾವನೆಯನ್ನೂ ನೀಡಿತ್ತು ಎಂದು ಆರ್ ಎಸ್ ಎಸ್ ಆರೋಪಿಸಿದೆ.
Advertisement