ಒಆರ್ ಒಪಿ ಜಾರಿ ವಿಳಂಬಕ್ಕೆ ಅರುಣ್ ಜೇಟ್ಲಿ ಕಾರಣ: ನಿವೃತ್ತ ಸೈನಿಕರ ಆಕ್ರೋಶ

ಒಆರ್ ಒಪಿ ಜಾರಿ ವಿಳಂಬಕ್ಕೆ ನಿವೃತ್ತ ಸೈನಿಕರು ಅರುಣ್ ಜೇಟ್ಲಿ ಅವರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ಭೋಪಾಲ್: ಒಆರ್ ಒಪಿ ಜಾರಿ ವಿಳಂಬಕ್ಕೆ ನಿವೃತ್ತ ಸೈನಿಕರು ಅರುಣ್ ಜೇಟ್ಲಿ ಅವರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.

ಒನ್ ರ್ಯಾಂಕ್ ಒನ್ ಪೆನ್ಷನ್ ವಾರ್ಷಿಕ ಪರಿಷ್ಕರಣೆ ಬಗ್ಗೆ ಮಾತನಾಡಿದ್ದ ಅರುಣ್ ಜೇಟ್ಲಿ, ನಿವೃತ್ತ ಸೈನಿಕರ ಪಿಂಚಣಿಯನ್ನು ವಾರ್ಷಿಕವಾಗಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು, ಜೇಟ್ಲಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸೈನಿಕರು, ಒಆರ್ ಒಪಿ ಜಾರಿ ವಿಳಂಬವಾಗಲು ಹಣಕಾಸು ಸಚಿವ ಅರುಣ್ ಜೇಟ್ಲಿಯೇ ಕಾರಣ ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ.  ಆದರೆ ಒಆರ್ ಒಪಿ ವಿಷಯದಲ್ಲಿ ಪ್ರಧಾನಿ ಏಕೆ ಮೌನವಾಗಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ನಿವೃತ್ತ ಬ್ರಿಗೇಡಿಯರ್ ವಿನಾಯಕ್ ಹೇಳಿದ್ದಾರೆ. ಆದರೆ ಅರುಣ್ ಜೇಟ್ಲಿ ಅವರ ಹೇಳಿಕೆ ಗಮನಿಸಿದರೆ, ಕೇಂದ್ರ ಸರ್ಕಾರ ಒಆರ್ ಒಪಿ ಜಾರಿ ಮಾಡುವ ಪರವಾಗಿಲ್ಲ ಎಂದು ವಿನಾಯಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಆರ್ ಒಪಿ ಜಾರಿಗೊಳಿಸುವುದರೊಂದಿಗೆ ನಿವೃತ್ತ ಸೈನಿಕರ ಪಿಂಚಣಿಯನ್ನು ವಾರ್ಷಿಕವಾಗಿ ಪರಿಷ್ಕರಣೆ ಮಾಡಬೇಕು ಎಂಬುದು ಪ್ರತಿಭಟನಾ ನಿರತ ನಿವೃತ್ತ ಸೈನಿಕರ ಆಗ್ರಹವಾಗಿದೆ. ಆದರೆ ಈ ಸಾಧ್ಯತೆಯನ್ನು ತಳ್ಳಿಹಾಕಿದ್ದ ಅರುಣ್ ಜೇಟ್ಲಿ, ಸೈನಿಕರ ಪಿಂಚಣಿಯನ್ನು ವಾರ್ಷಿಕವಾಗಿ ಪರಿಷ್ಕರಿಸುವ ಉದಾಹರಣೆಗಳು ಎಲ್ಲಿಯೂ ಇಲ್ಲ ಆದ್ದರಿಂದ ವಾರ್ಷಿಕ ಪರಿಷ್ಕರಣೆ ಅಸಾಧ್ಯ ಎಂದು ಹೇಳಿದ್ದರು.

ಸರ್ಕಾರ ಬೇಡಿಕೆ ಈಡೇರಿಸುವವರೆಗೂ ಶಾಂತಿಯುತ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿರುವ ನಿವೃತ್ತ ಸೈನಿಕರು, ಹಿಂದಿ ಸಮ್ಮೇಳನಕ್ಕೆ ಭೋಪಾಲ್ ಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸೇನಾ ಮುಖ್ಯಸ್ಥ, ಕೇಂದ್ರ ಸಚಿವ ವಿ.ಕೆ ಸಿಂಗ್ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com