ನನ್ನಮ್ಮನಿಗೂ ಇಂದ್ರಾಣಿಯದ್ದೇ ಸ್ವಭಾವ; ವಿದ್ಯಾರ್ಥಿಯ ಪತ್ರವನ್ನೋದಿ ದಂಗಾದ ಶಿಕ್ಷಕ!

ನಾನೊಬ್ಬ ಬುದ್ಧಿವಂತ ವಿದ್ಯಾರ್ಥಿ. ನನ್ನ ಅಮ್ಮ ಇಂದ್ರಾಣಿ ಮುಖರ್ಜಿಯಂತಿದ್ದಾರೆ. ಆಕೆ ಹಲವಾರು ಪುರುಷರೊಂದಿಗೆ ದೈಹಿಕ ಸಂಪರ್ಕವಿರಿಸಿಕೊಂಡಿದ್ದಾಳೆ...
ಇಂದ್ರಾಣಿ ಮುಖರ್ಜಿ
ಇಂದ್ರಾಣಿ ಮುಖರ್ಜಿ
Updated on

ನವದೆಹಲಿ: ದೆಹಲಿಯ ಖಾಸಗಿ ಶಾಲೆಯೊಂದರಲ್ಲಿ ಕಲಿಯುವ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬ ಶಿಕ್ಷಕರಿಗೆ ಒಂದು ಪತ್ರವನ್ನು ಬರೆದ. ಆ ಪತ್ರವನ್ನೋದಿದ ಶಿಕ್ಷಕರು   ದಂಗಾದರು. ಆ ಪತ್ರದಲ್ಲಿ ಅಂಥದ್ದೇನಿತ್ತು?

'ನಾನೊಬ್ಬ ಬುದ್ಧಿವಂತ ವಿದ್ಯಾರ್ಥಿ. ನನ್ನ ಅಮ್ಮ ಇಂದ್ರಾಣಿ ಮುಖರ್ಜಿಯಂತಿದ್ದಾರೆ. ಆಕೆ ಹಲವಾರು ಪುರುಷರೊಂದಿಗೆ ದೈಹಿಕ ಸಂಪರ್ಕವಿರಿಸಿಕೊಂಡಿದ್ದಾಳೆ.'

ಹೀಗೆ ಬರೆದ ಪತ್ರವನ್ನೋದಿದ ಕೂಡಲೇ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಯ ಹೆತ್ತವರನ್ನು ಶಾಲೆಗೆ ಕರೆಸಿದ್ದಾರೆ. ಇದೀಗ ಆ ವಿದ್ಯಾರ್ಥಿಗೆ ಆಪ್ತ ಸಮಾಲೋಚನೆಯ ಮೂಲಕ ಸಾಂತ್ವನ ನೀಡಲಾಗುತ್ತಿದೆ.

ಶಿಕ್ಷಕರು ಹೇಳುವುದೇನು?

ಈ ವಿಷಯವನ್ನು ದೊಡ್ಡದು ಮಾಡುವ ಉದ್ದೇಶ ನಮಗಿಲ್ಲ. ಆದರೆ ನಾವಿಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಇಂಥಾ ಪರಿಸ್ಥಿತಿಗಳನ್ನು ನಿಭಾಯಿಸುವುದು ಹೇಗೆ? ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವಂಥಾ ಸುದ್ದಿಗಳನ್ನು ನೀವು ನೋಡಬೇಡಿ ಎಂದು ವಿದ್ಯಾರ್ಥಿಗಳಿಗೆ ಹೇಳುವುದಾದರೂ ಹೇಗೆ?

ರೋಚಕ ಸುದ್ದಿಯ ಪ್ರಭಾವ

ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುವ ರೋಚಕ ಸುದ್ದಿಗಳು ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

ಹೆಚ್ಚಿನ ಶಾಲೆಗಳಲ್ಲಿ ಮಕ್ಕಳು ಸುದ್ದಿ ವಾಹಿನಿಗಳಲ್ಲಿ ಸುದ್ದಿಗಳನ್ನು ನೋಡುವಂತೆ, ಸುದ್ದಿ ಪತ್ರಿಕೆಗಳಲ್ಲಿ ಸುದ್ದಿಗಳನ್ನೋದುವಂತೆ ಹೇಳಲಾಗುತ್ತದೆ. ಸುದ್ದಿ ಮಾಧ್ಯಮಗಳು ಮಹಿಳೆಯೊಬ್ಬಳ ವ್ಯಕ್ತಿ ಜೀವನದ ಬಗ್ಗೆ ಕೆದಕಿ ಕೆದಕಿ ಅದನ್ನು ಎಳೆ ಎಳೆಯಾಗಿ ಬಿತ್ತರಿಸುವಾಗ ಅದನ್ನೋದಿದ, ಅದನ್ನು ಟೀವಿಯಲ್ಲಿ ವೀಕ್ಷಿಸುವ ಮಕ್ಕಳ ಮನಸ್ಸಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದಕ್ಕೆ ಈ ಬಾಲಕನ ಪತ್ರವೇ ಸಾಕ್ಷಿ.

ಶೀನಾ ಬೋರಾ ಹತ್ಯಾ ಪ್ರಕರಣದ ಸುದ್ದಿಯನ್ನು ಸುದ್ದಿ ಮಾಧ್ಯಮಗಳು ಬಿತ್ತರಿಸುವ ರೀತಿ ಎಳೆ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮವನ್ನುಂಟು ಮಾಡಿದೆ ಎಂಬುದು ಇಲ್ಲಿ ಗೊತ್ತಾಗುತ್ತದೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಮತ್ತು ಹಿರಿಯ ನ್ಯಾಯವಾದಿ ಅಶೋಕ್ ಅಗ್ರವಾಲ್ ಅಭಿಪ್ರಾಯ ಪಟ್ಟಿದ್ದಾರೆ.

ಇಂಥದ್ದೇ ಬೇರೆ ಪ್ರಕರಣವೂ ಇದೆ!
ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನದೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ತನ್ನ ಗುಪ್ತಾಂಗವನ್ನು ತೋರಿಸಿ ಸಿಕ್ಕಿ ಬಿದ್ದಿದ್ದ. ವಿದ್ಯಾರ್ಥಿನಿಯನ್ನು ಆಪ್ತ ಸಮಾಲೋಚನೆಗೊಳಪಡಿಸಿದಾಗ ಆಕೆ, ಹಲವಾರು ಹುಡುಗರು ತನಗೇ ಇದೇ ರೀತಿ ಅವರ ಗುಪ್ತಾಂಗಗಳನ್ನು ತೋರಿಸಿದ್ದರು ಎಂಬ ಸತ್ಯವನ್ನು ಬಹಿರಂಗ ಪಡಿಸಿದ್ದಳು. ಆದಾಗ್ಯೂ, ಈ ಹುಡುಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆಯೇ ಎಂಬುದರ ಬಗ್ಗೆ ಈಗ ಶಾಲಾ ಅಧಿಕೃತರು ತನಿಖೆ ನಡೆಸುತ್ತಿದ್ದಾರೆ. ನಾನು ನನ್ನದನ್ನು ತೋರಿಸುತ್ತೇನೆ, ನೀನು ನಿನ್ನದು ತೋರಿಸು ಎಂಬ ರೀತಿಯಲ್ಲಿ ಮಕ್ಕಳು ಕೆಟ್ಟ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ ಅಂತಾರೆ ಆ ಶಾಲೆಯ ಶಿಕ್ಷಕರು.

ಇನ್ನೊಂದು ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಅದೇ ತರಗತಿಯ ವಿದ್ಯಾರ್ಥಿಯೊಂದಿಗೆ ಖಾಲಿ ಕೋಣೆಯಲ್ಲಿ ಚಕ್ಕಂದವಾಡುತ್ತಾ ಸಿಕ್ಕಿ ಬಿದ್ದಿದ್ದ.

ಶಾಲೆಗಳಲ್ಲಿ ಇಂಥಾ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಶಾಲೆಯಲ್ಲಿ ಮಕ್ಕಳಲ್ಲಿನ ಇಂಥಾ ಸ್ವಭಾವಗಳನ್ನು ನಿಯಂತ್ರಿಸುವುದು ಕಷ್ಟ. ಆದ್ದರಿಂದ ಮಕ್ಕಳು ಏನು ನೋಡುತ್ತಾರೆ, ಏನು ಓದುತ್ತಾರೆ ಎಂಬುದರ ಬಗ್ಗೆ ಹೆತ್ತವರು ನಿಗಾ ವಹಿಸಬೇಕು ಎಂಬುದು ಶಾಲಾ ಅಧಿಕೃತರ ಅಭಿಪ್ರಾಯ.

ಮುಗ್ಧತೆಗೆ ಕೊಡಲಿಯೇಟು!
ಭಾರತದಲ್ಲಿ ಮಕ್ಕಳು 14 ವರ್ಷವಾಗುತ್ತಿದ್ದಂತೆಯೇ ದೈಹಿಕ ಸಂಪರ್ಕದ ಅನುಭವಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯೊಂದು ಪ್ರಕಟವಾಗಿತ್ತು. ಹೀಗಿರುವಾಗ ದೈಹಿಕ ಸಂಪರ್ಕದಿಂದ ಹರಡುವ ರೋಗಗಳಿಗೆ ಮಕ್ಕಳು ಬೇಗನೆ ಬಲಿಯಾಗುತ್ತಿದ್ದಾರೆ.  14ನೇ ವರುಷದಲ್ಲಿ ದೈಹಿಕ ಸಂಪರ್ಕದ ಬಗ್ಗೆ ಅರಿತುಕೊಳ್ಳುವ ಮಕ್ಕಳು 16ನೇ ವಯಸ್ಸಿನಲ್ಲಿ ಒಂದಕ್ಕಿಂತ ಹೆಚ್ಚು ಸಂಗಾತಿಗಳನ್ನು ಇಟ್ಟುಕೊಳ್ಳುತ್ತಾರೆ. ಈ ನಡುವೆಯೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವಲ್ಲಿ ನಾವು ಮೀನಾಮೇಷ ಎಣಿಸುತ್ತಿದ್ದೇವೆ.

ಮಕ್ಕಳಿಗೆ ಸರಿಯಾಗಿ ಮಾಹಿತಿಯನ್ನು ಸರಿಯಾದ ಮೂಲಗಳಿಂದ ಕೊಡುವ ಜವಾಬ್ದಾರಿ ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಇದೆ. ಇಂಥಾ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಮಕ್ಕಳನ್ನು  ಸರಿಯಾದ ದಿಶೆಯಲ್ಲಿ ಮುನ್ನಡೆಸಲು ಪ್ರಧಾನ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com