ಬೌದ್ಧರ ಆಧ್ಯಾತ್ಮಿಕ ರಾಜಧಾನಿಯಾಗಿ ಬೋಧ ಗಯಾ ಅಭಿವೃದ್ಧಿ: ಪ್ರಧಾನಿ ಮೋದಿ
ಪಾಟ್ನಾ: ಬಿಹಾರದ ಬೋಧ ಗಯಾ ಕ್ಷೇತ್ರವನ್ನು ಬೌದ್ಧ ಧರ್ಮದ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೋಧ ಗಯಾದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿ ಸೆ.5 ರಂದು ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಬೋಧ ಗಾಯಾ ಮನುಕುಲದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ಕ್ಷೇತ್ರವನ್ನು ಬೌದ್ಧ ಧರ್ಮದ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.
ಬುದ್ಧ ವಿಶ್ವಕ್ಕೆ ನೀತಿಬೋಧೆ ಮಾಡಿದ್ದಾರೆ, ಅವರು ಸಮಾನತೆಯನ್ನು ಪ್ರತಿಪಾದಿಸಿದ ಶ್ರೇಷ್ಠ ಗುರು, ವಯಕ್ತಿಕವಾಗಿ ನಾನು ಭಾರತವನ್ನು ಬೌದ್ಧ ಭಾರತ ಎಂದು ಕರೆಯುತ್ತೇನೆ, ಬುದ್ಧನ ಆಗಮನದ ನಂತರದ ಹಿಂದೂ ಧರ್ಮವನ್ನು, "ಹಿಂದೂ ಬೌದ್ಧ" ಅಥವಾ "ಬೌದ್ಧ ಹಿಂದೂ ಧರ್ಮ" ಎನ್ನಬಹುದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಬೋಧ್ ಗಯಾಕ್ಕೆ ಆಗಮಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ 1 ,500 ವರ್ಷದ ಹಿಂದಿನ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

