

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಸಿದ್ಧಾಂತವನ್ನು ಭೋಧಿಸುತ್ತಿದ್ದಾರೆಯೇ ಎಂದು ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಶುಕ್ರವಾರ ಪ್ರಶ್ನಿಸಿದ್ದಾರೆ.
"ಮೋದಿ ಶಿಕ್ಷಕರಾಗಿದ್ದರೇ? ಅವರು ಆರ್ ಎಸ್ ಎಸ್ ಮನುಷ್ಯ. ಅವರು ಆರ್ ಎಸ್ ಎಸ್ ಸಿದ್ಧಾಂತಗಳನ್ನು ಭೋಧಿಸುತ್ತಿದ್ದಾರೆಯೇ" ಎಂದು ಮೋದಿ ಶಿಕ್ಷಕರ ದಿನಾಚರಣೆ ಅಂಗವಾಗಿ ಮಕ್ಕಳ ಜೊತೆ ಸಂವಾದ ನಡೆಸಿದ ಹಿನ್ನಲೆಯಲ್ಲಿ ಲಾಲು ಪ್ರಶ್ನಿಸಿದ್ದಾರೆ.
"ಕೆಲವೊಮ್ಮೆ ರಸ್ತೆಗಳನ್ನು ಗುಡಿಸುತ್ತಾರೆ ಇನ್ನು ಕೆಲವೊಮ್ಮೆ ಯೋಗ ಹೇಳಿಕೊಡುತ್ತಾರೆ. ಅವರು ಶಿಕ್ಷಕರಾಗಿದ್ದರೇ? ಈ ಸಮಯದಲ್ಲಿ ನಮ್ಮ ಶಿಕ್ಷಕರನ್ನು ನೆನಪಿಸಿಕೊಳ್ಳುವುದು ಒಳಿತು" ಎಂದು ಕೂಡ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಶಿಕ್ಷಕರ ದಿನಾಚರಣೆ ಅಂಗವಾಗಿ ದೆಹಲಿಯ ವಿವಿಧ ಶಾಲೆಗಳ ೮೦೦ ವಿದ್ಯಾರ್ಥಿಗಳು ಹಾಗು ೬೦ ಶಿಕ್ಷಕರ ಜೊತೆ ಸಂವಾದ ನಡೆಸಿ, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದರು.