'ಜತಿಯಾ ಹೌಸ್' ಖರೀದಿಗೆ ಕುಮಾರ ಮಂಗಳಂ ಬಿರ್ಲಾ ಬಿಡ್ 425 ಕೋಟಿ!
ಮುಂಬೈ: ಮುಂಬೈನ ಪ್ರತಿಷ್ಟಿತ ಪ್ರದೇಶ ಮಲಬಾರ್ ಹಿಲ್ಸ್ ನಲ್ಲಿರುವ 'ಜತಿಯಾ ಹೌಸ್' ಖರೀದಿಗೆ ಖ್ಯಾತ ಉದ್ಯಮಿ ಕುಮಾರ ಮಂಗಳಂ ಬಿರ್ಲಾ ಮುಂದಾಗಿದ್ದು, ಇದಕ್ಕಾಗಿ ಬರೋಬ್ಬರಿ 425 ಕೋಟಿ ರುಪಾಯಿ ಹಣವನ್ನು ವ್ಯಯಿಸಲಿದ್ದಾರೆ ಎಂದು ಹೇಳಲಾಗಿದೆ.
ಸುಮಾರು ಒಂದು ಎಕರೆ ವಿಶಾಲ ಪ್ರದೇಶ ಹೊಂದಿರುವ ಜಾಗದಲ್ಲಿ ನಿರ್ಮಾಣಗೊಂಡಿರುವ ಜತಿಯಾ ಹೌಸ್ 25 ಸಾವಿರ ಚದರಡಿ ವಿಸ್ತೀರ್ಣದ ಮೂರು ಅಂತಸ್ಥಿನ ಕಟ್ಟಡವಾಗಿದ್ದು, ಇದನ್ನು ಕುಮಾರ ಮಂಗಳಂ ಬಿರ್ಲಾ 425 ಕೋಟಿ ರೂಪಾಯಿಗಳಿಗೆ ಖರೀದಿಸಲಿದ್ದಾರೆಂದು ಹೇಳಲಾಗಿದೆ.
ಮಲಬಾರ್ ಹಿಲ್ಸ್ ನಲ್ಲಿರುವ ಮತ್ತೊಂದು ಬಂಗಲೆ ಮಹೇಶ್ವರಿ ಹೌಸ್ 2011ರಲ್ಲಿ ಬರೋಬ್ಬರಿ 400 ಕೋಟಿಗೆ ಮಾರಾಟವಾಗಿತ್ತು. ಜತಿಯಾ ಹೌಸ್ ಪಕ್ಕದಲ್ಲೇ ಇರುವ ಹೊಮಿ ಬಾಬಾ ಅವರ ಮೇಹರಂಗಿರ್ ಮನೆ 2014ರಲ್ಲಿ 372 ಕೋಟಿಗೆ ಮಾರಾಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಜತಿಯಾ ಹೌಸ್ ಗಾಗಿ ಮುಂಬೈ ಮೂಲದ ಇಬ್ಬರು ಹಾಗೂ ದೆಹಲಿ ಮೂಲದ ಒಬ್ಬ ಉದ್ಯಮಿ ಮತ್ತು ಮುಂಬೈನ ಡೆವಲಪರ್ ಸಂಸ್ಥೆಯೂ ಪೈಪೋಟಿ ನಡೆಸಿದ್ದು, ಕುಮಾರ ಮಂಗಳಂ ಬಿರ್ಲಾ ಇವರೆಲ್ಲರಿಗಿಂತ ಅತಿ ಹೆಚ್ಚು ಹಣ ಬಿಡ್ ಮಾಡಿದ್ದಾರೆಂದು ಹೇಳಲಾಗಿದೆ.
ಕುಮಾರ ಮಂಗಳಂ ಬಿರ್ಲಾ ಈಗಾಗಲೇ ಪ್ರತಿಷ್ಟಿತ ಕಾರಮೈಕೆಲ್ ರಸ್ತೆಯಲ್ಲಿ ಬೃಹತ್ ಬಂಗಲೆ ಹೊಂದಿದ್ದು, ಅಲ್ಲಿಯೇ ತಮ್ಮ ಕುಟುಂಬದೊಡನೆ ವಾಸಿಸುತ್ತಿದ್ದಾರೆ. ಜತಿಯಾ ಹೌಸ್ ಖರೀದಿಸಿದ ಬಳಿಕ ಅಲ್ಲಿಗೆ ತಮ್ಮ ವಾಸ್ತವ್ಯ ಬದಲಿಸಲು ನಿರ್ಧರಿಸಿದ್ದಾರೆಂದು ಹೇಳಲಾಗಿದ್ದು, ಈ ವೇಳೆ ಜತಿಯಾ ಹೌಸ್ ನಲ್ಲಿ ಹೆಚ್ಚಿನ ಬದಲಾವಣೆಗಳೇನು ಮಾಡದೆ ಅಲ್ಪ ಸ್ವಲ್ಪ ನವೀಕರಣದೊಂದಿಗೆ ಹಳೆ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳುತ್ತಾರೆಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ