ಶಾಲಾ ಪಠ್ಯದಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ..?

ಪ್ರಾಚೀನ ಪವಿತ್ರಗ್ರಂಥಗಳೆಂದೇ ಕರೆಯಲ್ಪಡುವ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಲ್ಲಿನ ಅಂಶಗಳನ್ನು ಶಾಲಾ-ಕಾಲೇಜು ಪಠ್ಯಗಳಲ್ಲಿ ಸೇರಿಸುವ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ...
ರಾಮಾಯಣ, ಭಗವದ್ಗೀತೆ ಮತ್ತು ಮಹಾಭಾರತ(ಸಂಗ್ರಹ ಚಿತ್ರ)
ರಾಮಾಯಣ, ಭಗವದ್ಗೀತೆ ಮತ್ತು ಮಹಾಭಾರತ(ಸಂಗ್ರಹ ಚಿತ್ರ)

ನವದೆಹಲಿ: ಪ್ರಾಚೀನ ಪವಿತ್ರಗ್ರಂಥಗಳೆಂದೇ ಕರೆಯಲ್ಪಡುವ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಲ್ಲಿನ ಅಂಶಗಳನ್ನು ಶಾಲಾ-ಕಾಲೇಜು ಪಠ್ಯಗಳಲ್ಲಿ ಸೇರಿಸುವ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಈಗಾಗಲೇ ಕೇಂದ್ರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಂಸ್ಕೃತಿ ಸಚಿವಾಲಯದಿಂದ ಈ ಬಗ್ಗೆ ರೂಪುರೇಷೆಗಳು ಸಿದ್ದಗೊಳ್ಳುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ಈ ಮೂರು ಪುಸ್ತಕಗಳ ಅಂಶಗಳು ಶಾಲಾ-ಕಾಲೇಜು ಪಠ್ಯದಲ್ಲಿ ಸ್ಥಾನ ಪಡೆಯಲಿವೆ. ಪ್ರಾಚೀನ ಸಂಸ್ಕೃತಿಯನ್ನು ಯುವ ಜನತೆಗೆ ಪರಿಚಯಿಸುವ ಹಾಗೂ ನೈತಿಕ ಮೌಲ್ಯಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜು ಪಠ್ಯದಲ್ಲಿ ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಯ ಅಂಶಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಕೇಂದ್ರ ಸಂಸ್ಕೃತಿ ಖಾತೆಯ ಸಹಾಯಕ ಸಚಿವ ಮಹೇಶ್ ಶರ್ಮಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು "ಶಾಲಾ-ಕಾಲೇಜು ಪಠ್ಯದಲ್ಲಿ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ವಿಚಾರಗಳನ್ನು ಅಳವಡಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಂಸ್ಕೃತಿ ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗಿದೆ. ನಶಿಸಿ ಹೋಗುತ್ತಿರುವ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ತರುವ ನಿಟ್ಟಿನಲ್ಲಿ ಎನ್ ಡಿಎ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಇಲಾಖೆ ಆ ಬಗ್ಗೆ ಅಗತ್ಯ ರೂಪುರೇಷೆ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗ ಕೇಳಿಬಂದಿರುವ ಟೀಕೆಗಳ ಕುರಿತು ಉತ್ತರಿಸಿದ ಶರ್ಮಾ ಅವರು, ನಿರ್ದಿಷ್ಟ ಕುಟುಂಬವೊಂದು 60ಕ್ಕೂ ಹೆಚ್ಚು ವರ್ಷಗಳ ಕಾಲ ದೇಶವನ್ನಾಳುವ ಮೂಲಕ ಇಲ್ಲಿನ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆ ಅವಧಿಯಲ್ಲಿ ಮರೆಯಾಗಿ ಹೋಗಿರುವ, ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶಿಕ್ಷಣ ವ್ಯವಸ್ಥೆಯನ್ನು ಮರಳಿ ಜಾರಿಗೆ ತರಲು ಎನ್​ಡಿಎ ಕಾರ್ಯಪ್ರವೃತ್ತವಾಗಲಿದೆ. ನಮ್ಮ ಸಂಸ್ಕೃತಿ, ನೈತಿಕ ಮೌಲ್ಯಗಳು ಹಾಗೂ ರಾಮಾಯಣ, ಮಹಾಭಾರತ, ಭಗವದ್ಗೀತೆ ಮತ್ತಿತರ ಪುರಾಣ ಗ್ರಂಥಗಳ ಬಗ್ಗೆ ಯುವ ಜನರಲ್ಲಿ ತಿಳಿವಳಿಕೆ ಮೂಡಿಸಬೇಕೆಂಬುದೇ ನಮ್ಮ ಬಯಕೆ ಎಂದು ಸಚಿವರು ಹೇಳಿದ್ದಾರೆ.

ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರ ವಿವಾದಕ್ಕೀಡಾಗುವ ಸಾಧ್ಯತೆ ಇದ್ದು, ಅದಾಗಲೇ ವಿಪಕ್ಷಗಳು ಸರ್ಕಾರದ ನಡೆಯನ್ನು ಟೀಕಿಸಿವೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸುತ್ತಿದ್ದಾರೆ ಎಂದು ಆರೋಪಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com