
ಮುಂಬೈ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಭೂ ಸ್ವಾಧೀನ ಕಾಯ್ದೆ ವಿರೋಧ ಹಾಗೂ ಸಮಾನ ವೇತನ, ಸಮಾನ ಪಿಂಚಣಿ ಯೋಜನೆಗೆ ಒತ್ತಾಯಿಸಿ ಅ.2ರಂದು ನಿಗದಿ ಪಡಿಸಲಾಗಿದ್ದ ಉಪವಾಸ ಸತ್ಯಾಗ್ರಹವನ್ನು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಶನಿವಾರ ರದ್ದು ಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸತ್ಯಾಗ್ರಹ ಕುರಿತಂತೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಅಣ್ಣಾ ಹಜಾರೆ ಅವರು, ಮಹಾತ್ಮಗಾಂಧಿ ಅವರ ಜನ್ಮದಿನವಾದ ಅ.2 ರಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ನಿರ್ಧಾನ ಕೈಗೊಳ್ಳಲಾಗಿತ್ತು. ಆದರೆ, ಹೋರಾಟ ಹಾಗೂ ಜನರ ಒತ್ತಾಯಗಳಿಗೆ ಮಣಿದ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಯೋಧರಿಗೆ ಸಮಾನ ವೇತನ ಹಾಗೂ ಸಮಾನ ಪಿಂಚಣಿ ಯೋಜನೆಯನ್ನು ಜಾರಿ ಮಾಡಿದೆ. ಹೀಗಾಗಿ ಅ.2ರಂದು ನಿರ್ಧರಿಸಿದ್ದ ಸತ್ಯಾಗ್ರಹವನ್ನು ರದ್ದು ಪಡಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರದ ವಿವಾದಿತ ಭೂಸ್ವಾಧೀನ ಮಸೂದೆ ಕುರಿತಂತೆ ಮಾತನಾಡಿದ ಅವರು, ಭೂ ಸ್ವಾಧೀನ ಕಾಯ್ದೆಯು ರೈತರಿ ವಿರೋಧ ಮಸೂದೆಯಾಗಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಈ ಕುರಿತಂತೆ ಶೀಘ್ರದಲ್ಲೇ ಸಾರ್ವಜನಿಕವಾಗಿ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಅ.2ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅಣ್ಣಾ ಹಜಾರೆ ಅವರು ಈ ಹಿಂದೆ ಘೋಷಿಸಿದ್ದರು.
Advertisement