
ನವದೆಹಲಿ: ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಸಚಿವ ಸೋಮನಾಥ ಭಾರ್ತಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಸೋಮವಾರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಗಾರ್ಗ್ ಅವರು ಸೋಮನಾಥ ಭಾರ್ತಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದಾರೆ. ಭಾರ್ತಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ಗುರುವಾರ ಸೋಮನಾಥ ಭಾರ್ತಿ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್ ಕೂಡ ದಾಖಲು ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಧೀಶರು ಸೋಮನಾಥ್ ಭಾರ್ತಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಜೂನ್ 10ರಂದು ದೆಹಲಿಯ ದ್ವಾರಕಾದಲ್ಲಿರುವ ಉತ್ತರ ವಿಭಾಗದ ಪೊಲೀಸ್ ಠಾಣೆಯಲ್ಲಿ ಸೋಮನಾಥ ಭಾರ್ತಿ ಅವರ ಪತ್ನಿ ಲಿಪಿಕಾ ಮಿತ್ರಾ ಅವರು ದೂರು ಸಲ್ಲಿಕೆ ಮಾಡಿದ್ದರು. ಸೋಮನಾಥ ಭಾರ್ತಿ ಮದುವೆಯಾದಾಗಿನಿಂದಲೂ ತಮಗೆ ದೈಹಿಕ ಹಿಂಸೆ ನೀಡುತ್ತಿದ್ದರು. ಅಲ್ಲದೆ ಒಮ್ಮೆ ಕೊಲೆಗೂ ಯತ್ನ ನಡೆಸಿದ್ದರು ಎಂದು ದೂರಿದ್ದರು. ಈ ಹಿನ್ನಲೆಯಲ್ಲಿ ಸೋಮನಾಥ ಭಾರ್ತಿ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.
Advertisement