ಶೀಘ್ರ ಕೋಲಾರ ಗಣಿ ಹರಾಜು?

ಚಿನ್ನ ಆಮದು ಹೆಚ್ಚಳದಿಂದ ಆಗುತ್ತಿರುವ ಆರ್ಥಿಕ ನಷ್ಟವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಕ್ಕೆ ಬಂದಿರುವ ಕೇಂದ್ರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚಿನ್ನ ಆಮದು ಹೆಚ್ಚಳದಿಂದ ಆಗುತ್ತಿರುವ ಆರ್ಥಿಕ ನಷ್ಟವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಕ್ಕೆ ಬಂದಿರುವ ಕೇಂದ್ರ ಗಣಿ ಸಚಿವಾಲಯ, ಕರ್ನಾಟಕದ ಕೋಲಾರ ಸೇರಿದಂತೆ ದೇಶದ 3-4 ಹಳೆಯ ಚಿನ್ನದ ಗಣಿಗಳ ಹರಾಜು ಮೂಲಕ ಚಿನ್ನ ಉತ್ಪಾದನೆ ಹೆಚ್ಚಿಸಲು ಮುಂದಾಗಿದೆ.

ದೇಶದ ಒಂದು ಕಾಲದ ಪ್ರಮುಖ ಉದ್ಯಮವಾಗಿದ್ದ ಚಿನ್ನದ ಗಣಿಗಾರಿಕೆಗೆ ಮತ್ತೊಮ್ಮೆ ಬಂಗಾರದ ದಿನಗಳನ್ನು ತರಲು ಮುಂದಾಗಿರುವ ಸಚಿವಾಲಯ, ಕರ್ನಾಟಕ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ 3-4 ಚಿನ್ನದ ಗಣಿಗಳ ಗಣಿಗಾರಿಕೆ ಮುಂದುವರಿಸಲು ಮಂದಿನ ಕೆಲವೇ ತಿಂಗಳಲ್ಲಿ ಹರಾಜು ಕರೆಯಲಿದೆ ಎಂದು ಸಚಿವಾಲಯ ಕಾರ್ಯದರ್ಶಿ ಬಲ್ವಿಂದರ್ ಕುಮಾರ್ ಹೇಳಿದ್ದಾರೆ ಎಂದು `ಮೇಲ್ ಟುಡೆ' ವರದಿ ಮಾಡಿದೆ. ಸದ್ಯ ಕರ್ನಾಟಕದ ಹಟ್ಟಿ, ಜಾರ್ಖಂಡ್‍ನ ಮನಮೋಹನ್ ಇಂಡಸ್ಟ್ರೀಸ್‍ನಲ್ಲಿ ಮಾತ್ರ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ.

ಆದಾಯದ ಮೇಲೆ ಕಣ್ಣು: 2001ರಲ್ಲಿ ನಷ್ಟದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೆಜಿಎಫ್ನ ಚಿನ್ನದ ಗಣಿಯನ್ನು ಪುನರುಜ್ಜೀವ ನಗೊಳಿಸುವ ನಿಟ್ಟಿನಲ್ಲಿ ಸದ್ಯಕ್ಕೆ ಸರ್ಕಾರ ಈಗಾಗಲೇ ರಾಶಿಬಿದ್ದಿರುವ ಚಿನ್ನದ ಅದಿರಿನ ತ್ಯಾಜ್ಯವನ್ನು ಪುನರ್ ಸಂಸ್ಕರಿಸಲು ಹರಾಜು ಕರೆಯಲಿದೆ. ಮುಂದಿನ ಒಂದು ತಿಂಗಳೊಳಗೆ ವಿಶ್ವದ ಅತ್ಯಂತ ಪುರಾತನ ಮತ್ತು ಗುಣಮಟ್ಟದ ಚಿನ್ನದ ಗಣಿ ಎಂಬ ಹೆಗ್ಗಳಿಕೆ ಪಡೆದಿದ್ದ ಕೆಜಿಎಫ್ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಅದಿರು ತ್ಯಾಜ್ಯ ಸಂಸ್ಕರಣೆ ಹಾಗೂ ಗಣಿಗಾರಿಕೆಯಿಂದ ಕೆಜಿಎಫ್ನಲ್ಲಿ ರು.25 ಸಾವಿರ ಕೋಟಿ ಮೌಲ್ಯದ ಚಿನ್ನ ಉತ್ಪಾದನೆಯ ಅಂದಾಜಿದೆ. ಲಕ್ಷಾಂತರ ಟನ್ ಇರುವ ಅದಿರು ತ್ಯಾಜ್ಯದ ಸಂಸ್ಕರಣೆಗೆ ಜಾಗತಿಕ ಟೆಂಟರ್ ಕರೆಯಲು ಸಚಿವಾಲಯ ಕ್ರಮಕ್ಕೆ ಮುಂದಾಗಿದೆ. ವರ್ಷದ ಆರಂಭದಲ್ಲಿ ಸಂಸತ್ ಅನುಮೋದನೆ ಪಡೆದ ಗಣಿ ಮತ್ತು ಅದಿರು ಅಭಿವೃದ್ಧಿ ಮತ್ತು ನಿಯಂತ್ರಣ ತಿದ್ದುಪಡಿ ಕಾಯ್ದೆ(ಎಂಎಂಡಿಆರ್‍ಎ)ಯಡಿ ಸಚಿವಾಲಯ ಈ ಕ್ರಮ ಕೈಗೊಂಡಿದ್ದು, ರಾಜ್ಯ ಸರ್ಕಾರಗಳು ಕೂಡ ನೇರವಾಗಿ ಹರಾಜು ಪ್ರಕ್ರಿಯೆ ಆರಂಭಿಸಲೂ ಕಾಯ್ದೆಯಲ್ಲಿ ಅವಕಾಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com