ನಾಗಾ ಸಂಘಟನೆಗೆ 5 ವರ್ಷ ನಿಷೇಧ
ನವದೆಹಲಿ: ನಾಗಾ ಬಂಡುಕೋರ ಸಂಘಟನೆಯನ್ನು (ಎನ್ ಎಸ್ ಸಿಎನ್-ಕೆ) ಐದು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ನಾಗಾ ಸಂಘಟನೆ ಅನೇಕ ದಾಳಿ, ಸ್ಪೋಟಗಳಿಗೆ ಕಾರಣವಾಗಿದ್ದು, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಹಾಗಾಗಿ ಅದನ್ನು ನಿಷೇಧಿಸುವ ತೀರ್ಮಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಸುದ್ದಿ ಗಾರರಿಗೆ ತಿಳಿಸಿದ್ದಾರೆ.
ನಾಗ ಬಂಡಾಯಗಾರ ಗುಂಪು ಕಳೆದ ಜೂನ್ 4ರಂದು ಮಣಿಪುರದಲ್ಲಿ ನಡೆಸಿದ್ದ ದಾಳಿಯಲ್ಲಿ 18 ಮಂದಿ ಸೈನಿಕರು ಸಾವನ್ನಪ್ಪಿದ್ದರು. ಇಂತಹ ಅನೇಕ ದಾಳಿಗಳನ್ನು ನಡೆಸಿದ್ದಾರೆ. ವಸ್ತುನಿಷ್ಠ ಆಧಾರದ ಮೇಲೆ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ ಯೋಜನೆ ಘೋಷಿಸಿದಂತೆ ಈಶಾನ್ಯ ಭಾಗದ ಎಲ್ಲಾ ಬಂಡುಕೋರ ಸಂಘಟನೆಗಳ ಜೊತೆ ಮಾತುಕತೆ ನಡೆಸಲು ಎನ್ ಡಿಎ ಸರ್ಕಾರ ಬಯಸುತ್ತದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ