
ಮುಂಬೈ: ಹಿರಿಯ ಸಿಪಿಐ ನಾಯಕ ಗೋವಿಂದ್ ಪನ್ಸಾರೆ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ ಸನಾತನ ಸಂಸ್ಥಾನ ಸಕ್ರಿಯ ಸದಸ್ಯನನ್ನು ಬಂಧಿಸಿದ್ದು, ಆತನನ್ನು ಸಮೀರ್ ಗಾಯಕ್ ವಾಡ್ ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ ಗಾಯಕ್ ವಾಡ್ ನನ್ನು ಅವನ ಮನೆಯಲ್ಲಿ ಬಂಧಿಸಿದ್ದು, ಇಂದು ಕೊಲ್ಹಾಪುರದ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆತನನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತನಿಖಾ ತಂಡದ ನೇತೃತ್ವ ವಹಿಸಿರುವ ಐಜಿಪಿ ಸಂಜಯ್ ಕುಮಾರ್ ವರ್ಮ ತಿಳಿಸಿದ್ದಾರೆ.
ಸಮೀರ್ ಗಾಯಕ್ ವಾಡ್ 1998ರಿಂದ ಸನಾತನ್ ಸಂಸ್ಥದ ಸಕ್ರಿಯ ಕಾರ್ಯಕರ್ತನಾಗಿದ್ದು, ಅವನನ್ನು ಸೆಪ್ಟೆಂಬರ್ 23ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದ ನೆರವಿನಿಂದ ಸಮೀರ್ ನನ್ನು ಬಂಧಿಸಲಾಯಿತು ಎಂದು ವರ್ಮ ತಿಳಿಸಿದ್ದಾರೆ.
ಗಾಯಕ್ ವಾಡ್ ಮತ್ತು ಅವನ ಕುಟುಂಬದವರು ಸನಾತನ ಸಂಸ್ಥಾನದ ಜೊತೆ ಸಂಪರ್ಕ ಹೊಂದಿದ್ದರು. ಗೋವಾದಲ್ಲಿರುವ ಆಶ್ರಮಕ್ಕೆ ಹೋಗಿ ಬರುತ್ತಿದ್ದರು. ಫೆಬ್ರವರಿ 16ರಂದು 81 ವರ್ಷದ ಗೋವಿಂದ ಪನ್ಸಾರೆ ಅವರ ಮೇಲೆ ಕೊಲ್ಹಾಪುರ ನಗರದ ಸಾಗರ್ ಮಾಲಾ ಪ್ರದೇಶದ ಅವರ ಮನೆಯ ಹೊರಗೆ ಗುಂಡಿಕ್ಕಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಪನ್ಸಾರೆ ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ಐದು ದಿನ ಕಳೆದ ನಂತರ ಅವರು ಸಾವನ್ನಪ್ಪಿದ್ದರು.
ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯ ಚಿತ್ರ ಸ್ಪಷ್ಟವಾಗಿ ಬಂದಿರಲಿಲ್ಲ. ಅದಕ್ಕಾಗಿ ಲಂಡನ್ ಗೆ ಕಳುಹಿಸಿದ್ದರು. ಅಲ್ಲಿಂದ ಪಡೆದ ರೇಖಾಚಿತ್ರದ ಆಧಾರದ ಮೇಲೆ ವಿಶೇಷ ತನಿಖಾ ತಂಡ ಆರೋಪಿಯನ್ನು ಬಂಧಿಸಿದೆ.
Advertisement