65 ವರ್ಷದ ವೃದ್ದನ ಮೇಲೆ ಖಾಕಿ ದರ್ಪ; ಟೈಪ್ ರೈಟರ್ ಹೊಡೆದು ಹಾಕಿ ಅಮಾನವೀಯತೆ ಪ್ರದರ್ಶನ

ಉತ್ತರ ಪ್ರದೇಶದಲ್ಲಿ 65 ವರ್ಷದ ವೃದ್ಧನ ಮೇಲೆ ಖಾಕಿಧಾರಿ ಅಧಿಕಾರಿಯೊಬ್ಬ ತನ್ನ ದರ್ಪ ಪ್ರದರ್ಶನ ಮಾಡಿದ್ದು, ವೃದ್ಧನ ಜೀವನಾಧಾರವಾಗಿದ್ದ ಹಳೆಯ ಟೈಪ್ ರೈಟರ್ ಅನ್ನು ಹೊಡೆದು ಹಾಕಿ ತನ್ನ ಅಮಾನವೀಯತೆ ಪ್ರದರ್ಶನ ಮಾಡಿದ್ದಾನೆ...
ಕಿಶನ್ ಜೀ ಅವರ ಟೈಪ್ ರೈಟರ್ ಹೊಡೆದು ಹಾಕಿದ ಪೊಲೀಸ್ ಪ್ರದೀಪ್ ಕುಮಾರ್ (ಕೃಪೆ: ಎನ್ ಡಿಟಿವಿ)
ಕಿಶನ್ ಜೀ ಅವರ ಟೈಪ್ ರೈಟರ್ ಹೊಡೆದು ಹಾಕಿದ ಪೊಲೀಸ್ ಪ್ರದೀಪ್ ಕುಮಾರ್ (ಕೃಪೆ: ಎನ್ ಡಿಟಿವಿ)
Updated on

ಲಖನೌ: ಉತ್ತರ ಪ್ರದೇಶದಲ್ಲಿ 65 ವರ್ಷದ ವೃದ್ಧನ ಮೇಲೆ ಖಾಕಿಧಾರಿ ಅಧಿಕಾರಿಯೊಬ್ಬ ತನ್ನ ದರ್ಪ ಪ್ರದರ್ಶನ ಮಾಡಿದ್ದು, ವೃದ್ಧನ ಜೀವನಾಧಾರವಾಗಿದ್ದ ಹಳೆಯ ಟೈಪ್ ರೈಟರ್ ಅನ್ನು  ಹೊಡೆದು ಹಾಕಿ ತನ್ನ ಅಮಾನವೀಯತೆ ಪ್ರದರ್ಶನ ಮಾಡಿದ್ದಾನೆ.

65 ವರ್ಷದ ಕೃಷ್ಣಕುಮಾರ್ ಹಲವಾರು ವರ್ಷಗಳಿಂದ ಹಳೆಯದಾದ ಟೈಪ್​ರೈಟರ್ ಹಿಡಿದುಕೊಂಡು ಲಖನೌನ ಪ್ರಧಾನ ಅಂಚೆ ಕಚೇರಿ ಬಳಿಯ ಪಾದಚಾರಿ ಮಾರ್ಗದಲ್ಲಿ ಕುಳಿತು ತಮ್ಮ ಬಳಿ ಬರುತ್ತಿದ್ದ ಗ್ರಾಹಕರ ಕಾಗದಪತ್ರಗಳನ್ನು ಟೈಪ್ ಮಾಡಿಕೊಡುತ್ತಿದ್ದರು. ಸಿಗುತ್ತಿದ್ದ ಪುಡಿಗಾಸಿನಲ್ಲೇ ಅವರು ಕಳೆದ 35 ವರ್ಷಗಳಿಂದ ಸ್ವಾಲಂಬನೆಯ ಜೀವನ ನಡೆಸುತ್ತಿದ್ದರು. ಹಫ್ತಾ ಕೊಡುವಂತೆ ಪೊಲೀಸ್ ಸಬ್​ಇನ್ಸ್​ಸ್ಪೆಕ್ಟರ್ ಪ್ರದೀಪ್ ಕುಮಾರ್ ಒತ್ತಾಯಿಸುತ್ತಿದ್ದರು. ಇದಕ್ಕೆ ಕೃಷ್ಣಕುಮಾರ್ ನಿರಾಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಓಡಾಡುವವರಿಗೆ ತೊಂದರೆಯಾಗುತ್ತದೆ ಎಂಬ ನೆಪದಲ್ಲಿ ಬಂದ ಪ್ರದೀಪ್ ಕುಮಾರ್ ಏಕಾಏಕಿ ಕೃಷ್ಣಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಅಲ್ಲದೆ ಅವರ ಬಳಿ ಇದ್ದ ಟೈಪ್ ರೈಟರ್ ಯಂತ್ರವನ್ನು ನಾಶ ಮಾಡಲು ಮುಂದಾಗಿದ್ದರು. ಟೈಪ್ ರೈಟರ್ ಅನ್ನು ನಾಶ ಮಾಡದಂತೆ ಕಿಶನ್ ಜೀ ಕೈ ಮುಗಿದು ಬೇಡಿಕೊಂಡರೂ ಕರುಣೆ ತೋರದ ಪ್ರದೀಪ್ ಕುಮಾರ್  ಅದನ್ನು ಕಾಲಿನಿಂದ ಒದ್ದು ಪುಡಿ-ಪುಡಿ ಮಾಡಿದ್ದಾರೆ.

ದಾಳಿ ಸಂದರ್ಭದಲ್ಲಿ ಸ್ಥಳದಲ್ಲಿದ್ದವರೊಬ್ಬರು ಮೊಬೈಲ್​ಫೋನ್​ನಲ್ಲಿ ಪೊಲೀಸ್ ಪ್ರತಾಪವನ್ನು ವಿಡಿಯೋ ಚಿತ್ರೀಕರಿಸಿಕೊಂಡು, ಸಾಮಾಜಿಕ ಜಾಲತಾಣಕ್ಕೆ ಅಳವಡಿಸಿದ್ದರು. ಈ ವಿಡಿಯೋವನ್ನು ನೋಡಿದ ಜನರು ಉತ್ತರ ಪ್ರದೇಶದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಯುಪಿ ಸರ್ಕಾರದಿಂದ ಸಬ್ ಇನ್ಸ್ ಪೆಕ್ಟರ್ ಅಮಾನತು
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಕುಮಾರ್ ಅವರನ್ನು ಅಮಾನತುಗೊಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ  ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಕಚೇರಿ ಘಟನೆ ಕುರಿತಂತೆ ವಿಷಾಧ ವ್ಯಕ್ತಪಡಿಸಿದೆ.

ಕಿಶನ್ ಜೀ ಮನೆಗೆ ದೌಡಾಯಿಸಿದ ಎಸ್ ಪಿ
ಇದೇ ವೇಳೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವ್ಯಾಪಕ ಟೀಕೆಗೊಳಗಾಗುತ್ತಿದ್ದಂತೆಯೇ ಲಕ್ನೋ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶನ್ ಜೀ ಮನೆಗೆ  ದೌಡಾಯಿಸಿ ಅವರ ಬಳಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಅವರಿಗೆ ಹೊಸ ಟೈಪ್ ರೈಟರ್ ಯಂತ್ರವನ್ನು ನೀಡಿ, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸಿದಂತೆ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com