
ನವದೆಹಲಿ: ತನ್ನ ಯುದ್ಧ ತಂತ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಎದುರಾಳಿ ರಾಷ್ಟ್ರಗಳಿಗೆ ಬಲವಾದ ಸಂದೇಶ ರವಾನಿಸುವ ನಿಟ್ಟಿನಲ್ಲಿ ಭಾರತೀಯ ಸೇನೆ ಬೃಹತ್ ಯುದ್ಧ ತರಬೇತಿಯನ್ನು ಹಮ್ಮಿಕೊಂಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ರಾಜಸ್ತಾನದ ಮರುಭೂಮಿಯೊಂದರಲ್ಲಿ ಭಾರತೀಯ ಸೇನೆ ಬೃಹತ್ ಸೇನಾ ತರೇಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತರಬೇತಿಯಲ್ಲಿ 30 ಸಾವಿರಕ್ಕೂ ಅಧಿಕ ಸೇನಾ ಪಡೆಗಳು, ಭಾರತೀಯ ಸೇನೆಯ 21ಕ್ಕೂ ಅಧಿಕ ವಿವಿಧ ಸೇನಾ ತುಕಡಿಗಳು, ನೂರಕ್ಕೂ ಅಧಿಕ ಟ್ಯಾಂಕರ್ ಗಳು ಡ್ರೋಣ್ ಗಳು ಪಾಲ್ಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.
ತರಬೇತಿ ವೇಳೆಯಲ್ಲಿ ಶತ್ರುಪಾಳಯದ ವಲಯದೊಳಗೆ ನುಗ್ಗಿ ಅವರನ್ನು ಹೇಗೆ ಬಗ್ಗುಬಡಿಯಬೇಕು ಎನ್ನುವುದೇ ಮುಖ್ಯ ಉದ್ದೇಶವಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಪ್ರಕಟಿಸಿದೆ. ಇನ್ನು ಇದಕ್ಕೆ ಇಂಬು ನೀಡುವಂತೆ ಹಿಂದೆ ಮಾತನಾಡಿದ್ದ ಭಾರತೀಯ ಸೇನೆಯ ಮುಖ್ಯಸ್ಥ ದಲಬೀರ್ ಸಿಂಗ್ ಸುಹಾಗ್ ಅವರು, ಭಾರತೀಯ ಸೇನೆ ಸೀಮಿತ ಅವಧಿಯೊಳಗೆ ಭವಿಷ್ಯದ ಯುದ್ಧಕ್ಕೆ ಸಿದ್ದವಾಗಿರಬೇಕು ಎಂದು ಸಲಹೆ ನೀಡಿದ್ದರು.
ಇನ್ನು ಭಾರತೀಯ ಸೇನೆಯ ಈ ಬೃಹತ್ ತರಬೇತಿ ವಿಚಾರ ಪಾಕಿಸ್ತಾನ ಮತ್ತು ಚೀನಾ ದೇಶಗಳ ನಿದ್ದೆಗೆಡಿಸಿದ್ದು, ಉಭಯ ದೇಶಗಳು ರಾಜಸ್ತಾನ ತರಬೇತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಇನ್ನು ಪಾಕಿಸ್ತಾನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪರೋಕ್ಷವಾಗಿ ಭಾರತೀಯ ಸೇನೆಯ ತರಬೇತಿಯನ್ನು ವಿರೋಧಿಸಿದ್ದು, ಭಾರತ ಯುದ್ಧಕ್ಕೆ ಮುಂದಾದರೆ ಅದರ ದುಷ್ಪರಿಣಾಮವನ್ನು ಆ ದೇಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು, ಪಾಕಿಸ್ತಾನ ಯಾವುದೇ ರೀತಿಯ ಸಣ್ಣ ಅಥವಾ ಧೀರ್ಘಕಾಲಿಕ ಯುದ್ಧ ಸಂದರ್ಭಗಳಿಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ಭಾರತೀಯ ಸೇನೆಯ ಈ ಬೃಹತ್ ತರಬೇತಿ ವಿಚಾರ ಕೇವಲ ಪಾಕಿಸ್ತಾನ ಮಾತ್ರವಲ್ಲ. ನೆರೆಯ ಚೀನಾ ದೇಶದ ನಿದ್ದೆ ಗೆಡಿಸಿದೆ.
Advertisement