
ಮುಂಬೈ: ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಇಬ್ಬರು ಸದಸ್ಯರ ಕೈವಾಡವಿರುವ ಬಗ್ಗೆ ತೀವ್ರ ಗುಮಾನಿಯಿದ್ದು, ವಿಶೇಷ ತನಿಖಾ ತಂಡ (ಎಸ್‍ಐಟಿ) ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದೆ.
2009ರ ಗೋವಾ ಸ್ಫೋಟದ ನಂತರ ಬಲಪಂಥೀಯ ಸನಾತನ ಸಂಸ್ಥೆಯ ರುದ್ರಪಾಟೀಲ್ ಮತ್ತು ಸಾರಂಗ್ ಅಕೋಲ್ಕರ್ ಅಲಿಯಾಸ್ ಕುಲಕರ್ಣಿ ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರುದ್ರ ಪಾಟೀಲ್ ವಿಚಾರವಾದಿ ಪಾನ್ಸರೆ ಹತ್ಯೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಶಂಕೆ ಮೂಡಿದೆ. ಹೀಗಾಗಿ ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಕೊಲ್ಹಾಪುರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಇದೇ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನಿಂದ ಒಬ್ಬ ಮತ್ತು ಕರ್ನಾಟಕದಿಂದ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಗಾಯಕ್‍ವಾಡ್ ಸಂಪರ್ಕದಲ್ಲಿದ್ದ
ಕರ್ನಾಟಕದದಲ್ಲಿ ಬಂಧಿಸಲ್ಪಟ್ಟ ಸಮೀರ್ ಗಾಯಕ್‍ವಾಡ್‍ನ ದೂರವಾಣಿ ಕರೆಗಳ ಮಾಹಿತಿಯನ್ನು ಎಸ್‍ಐಟಿ ಸಂಗ್ರಹಿಸಿದೆ. ಗೋವಾ ಸ್ಫೋಟದ ಆರೋಪಿ ರುದ್ರ ಪಾಟೀಲ್ ಜತೆ ಗಾಯಕ್‍ವಾಡ್ ನಿರಂತರ ಸಂಪರ್ಕದಲ್ಲಿದ್ದುದು ಈ ಮಾಹಿತಿಯಿಂದ ಬಯಲಾಗಿದೆ. ಜತೆಗೆ, ಪಾನ್ಸರೆ ಹತ್ಯೆಯಾಗುವ ಒಂದು ತಿಂಗಳ ಹಿಂದೆ ಕೊಲ್ಹಾಪುರದಲ್ಲಿರುವ ಪಾನ್ಸರೆ ನಿವಾಸದ ಬಳಿ ಇವರು ಬಂದುಹೋಗಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. 2009ರ ಗೋವಾ ಸ್ಫೋಟದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಯು ರುದ್ರನನ್ನು ``ತಲೆಮರೆಸಿಕೊಂಡವರ ಪಟ್ಟಿ'' ಯಲ್ಲಿ ಸೇರಿಸಿದೆ. ತನ್ನ ವೆಬ್ ಸೈಟ್‍ನಲ್ಲೂ ಆತನ ಪ್ರೊಫೈಲ್ ಅಪ್ ಲೋಡ್ ಮಾಡಿದೆ. ಆದರೆ, ಆತನ ತಲೆಗೆ ಯಾವುದೇ ಬಹುಮಾನ ಘೋಷಿಸಿಲ್ಲ.
ಅಠಾವಳೆಯಲ್ಲಿ ದೈವಿಕ ಬದಲಾವಣೆ!
ಸನಾತನ ಸಂಸ್ಥೆಯ ಸ್ಥಾಪಕ ಜಯಂತ್ ಬಾಲಾಜಿ ಅಠಾವಳೆಯವರಲ್ಲಿ ದೈವಿಕ ಬದಲಾವಣೆಗಳಾಗುತ್ತಿವೆ ಎಂದು ಅವರ ಬೆಂಬಲಿಗರು ನಂಬಿದ್ದಾರೆ. ಅಠಾವಳೆ ಹಾಗೂ ಸನಾತನದ ವೆಬ್‍ಸೈಟ್, ಬ್ಲಾಗ್ ಗಳಲ್ಲಿ ಈ ಬದಲಾವಣೆಗಳನ್ನು ಪಟ್ಟಿ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ``ಅಠಾವಳೆಯ ತಲೆಗೂದಲು ಚಿನ್ನದ ಬಣ್ಣಕ್ಕೆ ತಿರುಗುತ್ತಿದೆ, ಅವರ ದೇಹದಿಂದ ದೈವಿಕ ಕಣಗಳು ಹೊರಬರುತ್ತಿವೆ, ಅವರ ಬೆರಳುಗಳು, ಹಣೆ, ನಾಲಗೆಯಲ್ಲಿ ಓಂ ಚಿಹ್ನೆ ಮೂಡಿದೆ ಮತ್ತು ದೇಹದಿಂದ ಸುವಾಸನೆ ಹೊರ ಹೊಮ್ಮುತ್ತಿದೆ'' ಎಂದು ವೆಬ್‍ಸೈಟ್‍ನಲ್ಲಿ ತಿಳಿಸಲಾಗಿದೆ.
ಮತ್ತೊಂದೆಡೆ, ಗುಲಾಬಿ ಬಣ್ಣದ ಟೂತ್‍ಬ್ರಷ್‍ನ ಚಿತ್ರವನ್ನು ಪ್ರಕಟಿಸಲಾಗಿದ್ದು, ಅಠಾವಳೆ ಬಳಸಲು ಆರಂಭಿಸಿದ ಇದರ ಬಣ್ಣ ಬದಲಾಗಿದೆ ಎಂದು ಬರೆಯಲಾಗಿದೆ. ``ಹಿಂದೂರಾಷ್ಟ್ರ ಕಟ್ಟಲು ಶ್ರಮಿಸುತ್ತಿರುವ ಅಠಾವಳೆ ಅವರನ್ನು ಮಹರ್ಷಿಗಳು, `ವಿಷ್ಣುವಿನ ಅವತಾರ' ಎಂದು ಘೋಷಿಸಿದ್ದಾರೆ.'' ಎಂದು ಬ್ಲಾಗ್ ನಲ್ಲಿ ಬರೆಯಲಾಗಿದೆ.
ಪತ್ರಕರ್ತನಿಗೆ ಬೆದರಿಕೆ
ಮಹಾರಾಷ್ಟ್ರದ ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ ಅವರಿಗೆ ಸನಾತನ ಸಂಸ್ಥೆಯಿಂದ ನಿರಂತರ ಬೆದರಿಕೆಗಳು ಬರುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಅದರಲ್ಲೂ ಗಾಯಕ್‍ವಾಡ್ ಬಂಧನದ ಬಳಿಕ ಬೆದರಿಕೆ ಕರೆಗಳ ಸಂಖ್ಯೆ ಹೆಚ್ಚಾಗಿದ್ದು, ಮಹಾರಾಷ್ಟ್ರ ಸರ್ಕಾರ ಪತ್ರಕರ್ತ ವಾಗ್ಲೆಗೆ ಭದ್ರತೆ ನೀಡಲು ಮುಂದಾಗಿದೆ. ಆದರೆ ಅವರು ಭದ್ರತೆ ಪ್ರಸ್ತಾಪನ್ನು ತಿರಸ್ಕರಿಸಿದ್ದಾರೆ. 4 ವರ್ಷಗಳಿಂದಲೇ ನನಗೆ ಬೆದರಿಕೆಗಳು ಬರುತ್ತಿವೆ. ಕಳೆದ ವಾರವಷ್ಟೇ ಸಂಸ್ಥೆಯ ಮುಖವಾಣಿ ಸನಾತನ್ ಪ್ರಭಾತ್ ನಲ್ಲಿ ಬೆದರಿಕೆಯೊಡ್ಡಿ ಲೇಖನ ಬರೆಯಲಾಗಿತ್ತು'' ಎಂದಿದ್ದಾರೆ ವಾಗ್ಲೆ.
ಸಮೀರ್ ಸನಾತನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ನಿಜ. ಹಾಗೆಂದು, ತನಿಖೆಯೇ ನಡೆಯದೆ ಗಲ್ಲಿಗೇರಿಸಬೇಕೆಂದು ಕೆಲವರು ಆಗ್ರಹಿಸುತ್ತಿರುವುದು ನೋಡಿದರೆ ನಗು ಬರುತ್ತದೆ. ಪಾನ್ಸರೆ ಪ್ರಕರಣದಲ್ಲಿ ಹಿಂದುತ್ವವನ್ನು ಅವಹೇಳನ ಮಾಡಬೇಡಿ.
-ಶಿವಸೇನೆ ಸಾಮ್ನಾ ಸಂಪಾದಕಿಯದಲ್ಲಿ
Advertisement