
ನವದೆಹಲಿ: ಪಾಕಿಸ್ತಾನ-ಚೀನಾಕ್ಕೆ ಭಾರತ ತಿರುಗೇಟು ನೀಡಿದ್ದು, ಇಸ್ರೇಲ್ ನೊಂದಿಗಿನ ಶಸ್ತ್ರಸಜ್ಜಿತ ಡ್ರೋಣ್ ಖರೀದಿ ಒಪ್ಪಂದದ ಕಾರ್ಯವನ್ನು ತ್ವರಿತಗೊಳಿಸಲು ಮುಂದಾಗಿದೆ.
ಪಾಕಿಸ್ತಾನ-ಚೀನಾ ದೇಶಗಳ ನಡುವಣ ಸೇನಾ ಬಳಕೆಯ ಡ್ರೋಣ್ ಖರೀದಿ ಒಪ್ಪಂದ ವೇರ್ಪಡುತ್ತಿದ್ದಂತೆಯೇ ಉಭಯ ದೇಶಗಳಿಗೆ ತಿರುಗೇಟು ನೀಡಿರುವ ಭಾರತದ ರಕ್ಷಣಾ ಇಲಾಖೆ ಇಸ್ರೇಲ್ ದೇಶದೊಂದಿಗೆ ಡ್ರೋಣ್ ಖರೀದಿಗೆ ಮುಂದಾಗಿದೆ. ಸೇನಾಮೂಲಗಳ ಪ್ರಕಾರ ಮೂರು ವರ್ಷಗಳ ಹಿಂದೆಯೇ ಇಸ್ರೇಲ್ ದೇಶದಿಂದ ಸೇನಾ ಬಳಕೆಯ ಮಾನವ ರಹಿತ ಲಘು ಯುದ್ಧ ವಿಮಾನ ಡ್ರೋನ್ ಖರೀದಿಗೆ ಭಾರತ ಮುಂದಾಗಿತ್ತು.
ಬಳಿಕ ಚೀನಾ ದೇಶದೊಂದಿಗೆ ಒಪ್ಪಂದ ಮಾಡಿಕೊಂಡ ಪಾಕಿಸ್ತಾನ ಆ ದೇಶದ ತಾಂತ್ರಿಕ ಸಹಕಾರದೊಂದಿಗೆ ತನ್ನದೇ ಡ್ರೋನ್ ವಿಮಾನವನ್ನು ತಯಾರಿಸಿತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕೇಂದ್ರ ರಕ್ಷಣಾ ಇಲಾಖೆಯನ್ನು ಎಚ್ಚರಿಸಿದ್ದ ಸೇನೆ ಕೂಡಲೇ ಇಸ್ರೇಲ್ ನೊಂದಿಗಿನ ಡ್ರೋನ್ ಖರೀದಿ ಒಪ್ಪಂದ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕಳೆದ ಜನವರಿಯಲ್ಲಿ ಸಲಹೆ ನೀಡಿತ್ತು. ಇದೀಗ ಈ ಕಾರ್ಯವನ್ನು ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರ, ವಾಯುಪಡೆಯ ಸಲ್ಲಿಸಿದ್ದ ಸುಮಾರು 2, 620 ಕೋಟಿ ಮೌಲ್ಯದ 10 ಡ್ರೋನ್ ವಿಮಾನ ಖರೀದಿ ಮನವಿಗೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.
ಹೆರಾನ್ ಎಂದು ಕರೆಯಲ್ಪಡುವ ಈ ವಿಮಾನಗಳಿಗೆ ಅತ್ಯಾಧುನಿಕ ಕ್ಷಿಪಣಿಗಳಂತಹ ಶಸ್ತ್ರಗಳನ್ನು ಅಳವಡಿಸಿ ಉಡಾಯಿಸ ಬಹುದಾಗಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ನೀಡಲು ಕೇಂದ್ರ ರಕ್ಷಣಾ ಇಲಾಖೆ ನಿರಾಕರಿಸಿದೆ.
Advertisement