ರಾಮೇಶ್ವರಂ: ಶ್ರೀಲಂಕಾಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇರೆಗೆ ಶ್ರೀಲಂಕಾದ ನೌಕಾಪಡೆ 15 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಭಾರತ-ಶ್ರೀಲಂಕಾ ನಡುವಿನ ಅಂತಾರಾಷ್ಟ್ರೀಯ ಸಮುದ್ರ ಗಡಿ ಪ್ರದೇಶ ಕಚ್ಚಾತೀವು ಬಳಿಯಲ್ಲಿ ಮೀನುಗಾರರನ್ನು ಬಂಧಿಸಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಮೀನುಗಾರರು ನಡೆಸುತ್ತಿದ್ದ 2 ಬೋಟ್ ಗಳ ಅನ್ನು ಕೂಡ ಲಂಕಾ ನೌಕಾಪಡೆ ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರೂ ಅಕ್ಕರೈಪೇಟ್ಟೈ ಮತ್ತು ನಾಗಪಟ್ಟಣಂಗೆ ಸೇರಿದವರು ಎನ್ನಲಾಗುತ್ತಿದ್ದು, ಎಲ್ಲ 15 ಮಂದಿ ಮೀನುಗಾರರನ್ನು ಪ್ರಸ್ತುತ ಕಾಂಗೇಸುಂತುರೈನಲ್ಲಿನ ಜೈಲಿಗೆ ರವಾನಿಸಲಾಗಿದೆ ಎಂದು ಎಂದು ತಿಳಿದುಬಂದಿದೆ.
ಮತ್ತೊಂದು ಪ್ರಕರಣದಲ್ಲಿ ಕಳೆದ ಸೋಮವಾರ ರಾತ್ರಿ ಕಚ್ಚಾತೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದ ಸುಮಾರು 60 ಬೋಟ್ ಗಳ ಮೀನುಗಾರಿಕಾ ನೆಟ್ ಗಳು ಮತ್ತು ಇತರೆ ವಸ್ತುಗಳನ್ನು ಲಂಕಾದ ನೌಕಾಪಡೆಯ ಸಿಬ್ಬಂದಿ ನಾಶ ಮಾಡಿದ್ದಲ್ಲದೇ ಅವುಗಳನ್ನು ಸಮುದ್ರಕ್ಕೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಸ್ಥಳೀಯ ಮೀನುಗಾರರ ಸಂಘದ ಒಕ್ಕೂಟದ ಮುಖಂಡರಾದ ಎಸ್.ಎಮೆರಿಟ್ ಮತ್ತು ಸಗಾಯರಾಜು ಅವರು, "ಕಚ್ಚಾತೀವು ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರಿಕಾ ಬೋಟ್ ಅನ್ನು ಲಂಕಾದ ನೌಕಾಪಡೆ ಅಕ್ರಮವಾಗಿ ಬೆನ್ನಟ್ಟಿತು. ಈ ವೇಳೆ ಒಂದು ಬೋಟ್ ನೀರಿನಲ್ಲಿ ಮುಳುಗಿತು. ಜೊತೆಗಿದ್ದ ಬೋಟ್ ನ ಸಹಾಯದಿಂದ ಅದರಲ್ಲಿದ್ದ 5 ಮಂದಿ ಮೀನುಗಾರರನ್ನು ರಕ್ಷಿಸಲಾಯಿತು".
"ಲಂಕಾ ನೌಕಾಪಡೆಯ ಸಿಬ್ಬಂದಿ ಮೀನುಗಾರರಿಗೆ ಗನ್ ತೋರಿಸಿ ಕಚ್ಚಾತೀವು ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ನಮ್ಮ ಸುಮಾರು 60 ಬೋಟ್ ಗಳಲ್ಲಿನ ಮೀನುಗಾರಿಕಾ ನೆಟ್ ಗಳು ಮತ್ತು ಇತರೆ ಸಲಕರಣೆಗಳನ್ನು ನಾಶ ಮಾಡಿ ಸಮುದ್ರಕ್ಕೆ ಎಸೆದಿದ್ದಾರೆ. ಇದರಿಂದಾಗಿ ಭಯಬೀತರಾದ ನಮ್ಮ ಮೀನುಗಾರರು ಯಾವುದೇ ಮೀನುಗಳನ್ನು ತರದೇ ಖಾಲಿ ಕೈಯಲ್ಲಿ ವಾಪಸಾಗಿದ್ದಾರೆ" ಎಂದು ಆರೋಪಿಸಿದ್ದಾರೆ.
Advertisement