ಗುರಿ ತಪ್ಪಿದ ಸೇನಾ ಟ್ಯಾಂಕರ್; ಓರ್ವ ಸೈನಿಕ ಅಧಿಕಾರಿ ದುರ್ಮರಣ

ಭಾರತೀಯ ಸೇನೆ ನಡೆಸುತ್ತಿರುವ ಸೈನಿಕ ತರಬೇತಿ ವೇಳೆ ದುರ್ಘಟನೆಯೊಂದು ಸಂಭವಿಸಿದ್ದು, ಸೇನಾ ಟ್ಯಾಂಕರ್ ಸಿಡಿಸಿದ ಗುಂಡು ಗುರಿತಪ್ಪಿದ ಪರಿಣಾಮ ಓರ್ವ ಯುವ ಸೈನಿಕ ಅಧಿಕಾರಿ ದುರ್ಮರಣಕ್ಕೀಡಾಗಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೋಖ್ರಾನ್: ಭಾರತೀಯ ಸೇನೆ ನಡೆಸುತ್ತಿರುವ ಸೈನಿಕ ತರಬೇತಿ ವೇಳೆ ದುರ್ಘಟನೆಯೊಂದು ಸಂಭವಿಸಿದ್ದು, ಸೇನಾ ಟ್ಯಾಂಕರ್ ಸಿಡಿಸಿದ ಗುಂಡು ಗುರಿತಪ್ಪಿದ ಪರಿಣಾಮ ಓರ್ವ ಯುವ  ಸೈನಿಕ ಅಧಿಕಾರಿ ದುರ್ಮರಣಕ್ಕೀಡಾಗಿದ್ದಾರೆ.

ರಾಜಸ್ತಾನದ ಪೋಖ್ರಾನ್ ನಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ಸೈನಿಕ ತರಬೇತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೇಜರ್ ದ್ರುವ ಯಾದವ್ ಎಂಬ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು  ಸೇನಾ ಮೂಲಗಳು ತಿಳಿಸಿವೆ. ಮೇಜರ್ ದ್ರುವ ಯಾದವ್ ಅವರು ಸೇನೆಯ 75ನೇ 75 ರೆಜಿಮೆಂಟ್ ನ ಅಧಿಕಾರಿಯಾಗಿದ್ದರು ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ನಡೆಯುತ್ತಿದ್ದ  ಸಮರಾಭ್ಯಾಸದ ವೇಳೆ ಅರ್ಜುನ ಸರಣಿಯ ಟ್ಯಾಂಕರ್ ಗಳು ಅಭ್ಯಾಸ ನಡೆಸುತ್ತಿದ್ದವು. ಈ ವೇಳೆ ಹಿಂಬದಿಯಲ್ಲಿದ್ದ ಟ್ಯಾಂಕರ್ ಸಿಡಿಸಿದ ಗುಂಡು ಗುರಿತಪ್ಪಿ ದ್ರುವ್ ಯಾದವ್ ಪಯಣಿಸುತ್ತಿದ್ದ  ಟ್ಯಾಂಕರ್ ಗೆ ಬಡಿದಿದೆ.

ಈ ವೇಳೆ ಟ್ಯಾಂಕರ್ ನಲ್ಲಿದ್ದ ದ್ರುವ್ ಯಾದವ್ ಅವರ ಕುತ್ತಿಗೆಗೆ ಗಂಭೀರ ಗಾಯವಾಗಿ ಅಪಾರ ಪ್ರಮಾಣದ ರಕ್ತ ಸೋರಿಕೆಯಾಗಿದೆ. ಗುಂಡು ಬಡಿದ ರಭಸಕ್ಕೆ ಟ್ಯಾಂಕರ್ ನ ಬಾಗಿಲು  ಜಖಂಗೊಂಡಿತ್ತು. ಹೀಗಾಗಿ ಮೇಜರ್ ದ್ರುವ್ ಯಾದವ್ ಟ್ಯಾಂಕರ್ ನಿಂದ ಹೊರಬರಲು ಸಾಧ್ಯವಾಗದೇ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸೋರಿಕೆಯಾಗಿದೆ. ಅಲ್ಲದೇ ಸೂಕ್ತ ಸಮಯದಲ್ಲಿ ಅವರನ್ನು  ಆಸ್ಪತ್ರೆಗೆ ದಾಖಲಿಸಲು ತೊಂದರೆಯಾದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಪೋಖ್ರಾನ್ ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ದ್ರುವ್ ಯಾದವ್ ಅವರ ಮರಣೋತ್ತರ  ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಭಾರತೀಯ ಸೇನೆಯ ಅಧಿಕಾರಿಗಳು ತನಿಖೆ ಆದೇಶಿಸಿದ್ದಾರೆ. ಮೇಜರ್ ದ್ರುವ್ ಯಾದವ್ ಅವರು ಈ ಹಿಂದೆ ಡೆಹ್ರಾಡೂನ್ ನಲ್ಲಿರುವ ಸೈನಿಕ ಅಕಾಡೆಮಿಯಲ್ಲಿ  ತರಬೇತುದಾರರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ದ್ರುವ್ ಯಾದವ್ ಅವರು 2 ವರ್ಷದ ಹಿಂದಷ್ಟೇ ಮದುವೆಯಾಗಿದ್ದು, ಅವರ ಪತ್ನಿ ಪ್ರಸ್ತುತ 8 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.

ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಕ್ಷಣಾ ಇಲಾಖೆ ಸಮಗ್ರ ತನಿಖೆಗೆ ಆದೇಶಿಸಿದ್ದು, ಇದೇ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬೃಹತ್ ಸೇನಾ ತರೇಬೇತಿ  ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹೀಗಾಗಿ ಮೇಜರ್ ದ್ರುವ್ ಯಾದವ್ ಪ್ರಕರಣದಂತಹ ದುರ್ಘಟನೆಗಳು ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೈನಿಕ ಅಧಿಕಾರಿಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com