ಗುಜ್ಜಾರ್‍ಗೆ ಮೀಸಲಾತಿ ಕೊಟ್ಟ ರಾಜಸ್ಥಾನ

ಗುಜ್ಜಾರ್ ಸಮುದಾಯದ ಪ್ರತಿಭಟನೆಗೆ ಮಣಿದಿರುವ ರಾಜಸ್ಥಾನ ಸರ್ಕಾರ ಅವರಿಗೆ ಶೇ.5 ರಷ್ಟು ಮೀಸಲಾತಿ ನೀಡಲು ಒಪ್ಪಿಗೆ ನೀಡಿದೆ. ಜತೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೂ ಶೇ.14 ರಷ್ಟು ಮೀಸಲು ನೀಡಲು ರಾಜಸ್ಥಾನ ವಿಧಾನಸಭೆ ಅನುಮತಿ ನೀಡಿದೆ...
ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ (ಸಂಗ್ರಹ ಚಿತ್ರ)
ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ (ಸಂಗ್ರಹ ಚಿತ್ರ)

ಜೈಪುರ: ಗುಜ್ಜಾರ್ ಸಮುದಾಯದ ಪ್ರತಿಭಟನೆಗೆ ಮಣಿದಿರುವ ರಾಜಸ್ಥಾನ ಸರ್ಕಾರ ಅವರಿಗೆ ಶೇ.5 ರಷ್ಟು ಮೀಸಲಾತಿ ನೀಡಲು ಒಪ್ಪಿಗೆ ನೀಡಿದೆ. ಜತೆಗೆ ಆರ್ಥಿಕವಾಗಿ ಹಿಂದುಳಿದ  ವರ್ಗಗಳಿಗೂ ಶೇ.14 ರಷ್ಟು ಮೀಸಲು ನೀಡಲು ರಾಜಸ್ಥಾನ ವಿಧಾನಸಭೆ ಅನುಮತಿ ನೀಡಿದೆ.

ಗುಜ್ಜಾರ್ ಸಮುದಾಯಕ್ಕೆ ವಿಶೇಷ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಮಂಗಳವಾರದ ಕಲಾಪದಲ್ಲಿ ಈ ಎರಡೂ ಪ್ರಮುಖ ನಿರ್ಣಯಗಳಿಗೆ ಒಪ್ಪಿಗೆ ನೀಡಿದ್ದು, ಇದು  ಮೀಸಲಾತಿ ಕುರಿತ ಹೊಸ ಸಾಧ್ಯತೆಗಳಿಗೆ ಅವಕಾಶ ಕಲ್ಪಿಸಿದೆ ಎಂದೇ ಹೇಳಲಾಗಿದೆ. ಅಲ್ಲದೆ ರಾಜಸ್ಥಾನ ಸರ್ಕಾರದ ಒಟ್ಟಾರೆ ಮೀಸಲಾತಿ ಶೇ.68 ಕ್ಕೆ ಏರಿಕೆಯಾಗಿದ್ದು, ಇದು  ಸುಪ್ರೀಂಕೋರ್ಟ್‍ನ ತೀರ್ಪಿನವಿರೋಧಿ ಎಂದೇ ಹೇಳಲಾಗಿದೆ. ಏಕೆಂದರೆ ಯಾವುದೇ ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಶೇ.50ಕ್ಕಿಂತ ಮೀರುವಂತಿಲ್ಲ. ಆದರೆ ರಾಜಸ್ಥಾನದ ಈ ನಿರ್ಣಯಗಳ  ಮುಖಾಂತರ ಅದು ಶೇ.68ಕ್ಕೆ ಏರಿಕೆ ಮಾಡಿಕೊಂಡಿದೆ.

ರಾಜಸ್ಥಾನ ಸರ್ಕಾರದ ಈ ನಿರ್ಧಾರವನ್ನು ಒಂದು ಪ್ರಹಸನ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಸಂವಿಧಾನದಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ  ಹೇಳಿದೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲೂ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ. ಆದರೂ ರಾಜಸ್ಥಾನ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು  ನೀಡಿದೆ. ಇದೊಂದು ದುರಂತ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ. ಸಂವಿಧಾನ ಹೇಳಿರುವ ಪ್ರಕಾರ, ಕೇವಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವವರಿಗೆ  ಮಾತ್ರ ಮೀಸಲಾತಿ ಕಲ್ಪಿಸಲು ಅವಕಾಶವಿದೆ ಎಂದಿದ್ದಾರೆ.

ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಆರ್.ಎಸ್. ರಾಥೋರ್ ಮಾತನಾಡಿ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಈಗಾಗಲೇ ಶೇ.50ಕ್ಕಿಂತ ಹೆಚ್ಚು ಮೀಸಲಾತಿ  ನೀಡಲಾಗಿದೆ. ಹೀಗಾಗಿ ನಮ್ಮ ನಿರ್ಧಾರದಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ. ಆದರೆ ರಾಜೇ ತಮ್ಮ ಹಿಂದಿನ ಅವಧಿಯಲ್ಲೂ ಜಾರಿಗೆ ತಂದಿದ್ದ ಮೀಸಲಾತಿಯನ್ನು ಸುಪ್ರೀಂಕೋರ್ಟ್ ರದ್ದು  ಮಾಡಿತ್ತು.

ಆರ್ಥಿಕ ಹಿಂದುಳಿದವರಿಗೂ ಇನ್ನು ಮೀಸಲಾತಿ?
ರಾಜಸ್ಥಾನ ಸರ್ಕಾರದ ನಿರ್ಧಾರದಂತೆ ಇನ್ನು ಮುಂದೆ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೂ ಮೀಸಲಾತಿ ಸಿಗಲಿದೆಯೇ? ಆರ್‍ಎಸ್ ಎಸ್ ಮುಖ್ಯಸ್ಥ ಭಾಗವತ್ ಹೇಳಿಕೆಯಿಂದ ಬಿಜೆಪಿ  ಸಂಪೂರ್ಣಹಿಂದೆ ಸರಿದಿದ್ದರೂ, ಹಾಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಮೇಲ್ಜಾತಿಯ ಹಿಂದುಳಿದವರಿಗೆ ಮೀಸಲು ನೀಡುವ ಸಾಧ್ಯತೆಯ ಸುಳಿವು ನೀಡಿದೆ. ಕೇಂದ್ರ ಸರ್ಕಾರ ಹೇಳಿದಂತೆ  ಎಸ್‍ಸಿ, ಎಸ್‍ಟಿ ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಶೇ.50ರಷ್ಟು ಮುಟ್ಟಲು ಸಾಧ್ಯವಿಲ್ಲ. ಆದರೆ ಉಳಿದ ಶೇ.50ರಲ್ಲಿ ಮೇಲ್ಜಾತಿಯವರಿಗೆ ಮೀಸಲಾತಿ ನೀಡುವ ಚಿಂತನೆ  ನಡೆಸುತ್ತಿದೆ ಎನ್ನಲಾಗಿದೆ. ಆದರೆ, ಸದ್ಯ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಆ ಬಗ್ಗೆ ಹೆಚ್ಚು ಚರ್ಚಿಸಲ್ಲ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com