ದೆಹಲಿಯಲ್ಲಿ ಆಪ್ ಸಭೆ: ಸೋಮನಾಥ್ ಭಾರ್ತಿ ಭವಿಷ್ಯ ನಿರ್ಧಾರ ಸಾಧ್ಯತೆ

ಗೃಹ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರಂಟ್ ಪಡೆದಿರುವ ಆಪ್ ಮುಖಂಡ ಮತ್ತು ದೆಹಲಿ ಮಾಜಿ ಸಚಿವ ಸೋಮನಾಥ್ ಭಾರ್ತಿ ಅವರ ರಾಜಕೀಯ ಭವಿಷ್ಯ ಇದೀಗ ತೂಗುಯ್ಯಾಲೆಯಲ್ಲಿದೆ..
ಸೋಮನಾಥ್ ಭಾರ್ತಿ (ಸಂಗ್ರಹ ಚಿತ್ರ)
ಸೋಮನಾಥ್ ಭಾರ್ತಿ (ಸಂಗ್ರಹ ಚಿತ್ರ)

ನವದೆಹಲಿ: ಗೃಹ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರಂಟ್ ಪಡೆದಿರುವ ಆಪ್ ಮುಖಂಡ ಮತ್ತು ದೆಹಲಿ ಮಾಜಿ ಸಚಿವ ಸೋಮನಾಥ್ ಭಾರ್ತಿ ಅವರ  ರಾಜಕೀಯ ಭವಿಷ್ಯ ಇದೀಗ ತೂಗುಯ್ಯಾಲೆಯಲ್ಲಿದೆ.

ಪತ್ನಿಗೆ ದೈಹಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿದಂ ಬಂಧನ ಭೀತಿ ಎದುರಿತ್ತಿಸುತ್ತಿರುವ ಸೋಮನಾಥ್ ಭಾರ್ತಿ ಪ್ರಸ್ತುತ ನಾಪತ್ತೆಯಾಗಿದ್ದು, ಯಾವುದೇ  ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇನ್ನು ಸೋಮನಾಥ್ ಭಾರ್ತಿ ಅವರ ಪ್ರಕರಣದಿಂದ ತೀವ್ರ ಮುಜುಗರಕ್ಕೀಡಾಗಿರುವ ಆಮ್ ಆದ್ಮಿ ಪಕ್ಷ ಇಂದು ಈ ಬಗ್ಗೆ  ಚರ್ಚಿಸಲು ಸಭೆ ಸೇರುತ್ತಿದೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಅರವಿಂದ್ ಕೇಂಜ್ರಿವಾಲ್ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದ್ದು, ಕೇಜ್ರಿವಾಲ್ ಅವರ ದೆಹಲಿ ನಿವಾಸದಲ್ಲಿ ಈ ಸಭೆ  ನಡೆಯುತ್ತಿದೆ. ಸಭೆಯಲ್ಲಿ ಸೋಮನಾಥ್ ಭಾರ್ತಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಪಕ್ಷದಿಂದ ಉಚ್ಛಾಟಿಸಬೇಕೆ ಎಂಬ ವಿಚಾರದ ಕುರಿತು ಮುಖಂಡರು ನಿರ್ಧಾರ ಕೈಗೊಳ್ಳುವ  ಸಾಧ್ಯತೆ ಇದೆ.

ಈ ಹಿಂದೆ ಭಾರ್ತಿ ವಿರುದ್ಧ ದೂರು ದಾಖಲಿಸಿದ್ದ ಅವರ ಪತ್ನಿ ಲಿಪಿಕಾ ಮಿತ್ರಾ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಕೇಜ್ರಿವಾಲ್ ಅವರು  ಮೊದಲು ದೆಹಲಿ ಆಡಳಿತದತ್ತ ಗಮನಹರಿಸಬೇಕು. ಆ ಬಳಿಕ ತಮ್ಮ ಸ್ನೇಹದ ಬಗ್ಗೆ ಕಾಳಜಿ ವಹಿಸಲಿ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಮಾಧ್ಯಮಗಳಿಗೆ ಹೇಳಿಕೆ  ನೀಡಿದ್ದ ಕೇಜ್ರಿವಾಲ್ ಅವರು ಸೋಮನಾಥ್ ಭಾರ್ತಿ ಅವರಿಂದ ಪಕ್ಷಕ್ಕೆ ತೀವ್ರ ಮುಜುಗರವಾಗಿದ್ದು, ಅವರು ತನಿಖೆಗೆ ಸಹಕರಿಸಬೇಕು ಎಂದು ಹೇಳಿದ್ದರು.

ಇದೀಗ ಭಾರ್ತಿ ನಾಪತ್ತೆಯಾಗಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ಆಪ್ ಸಭೆಯಲ್ಲಿ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.  ಪತ್ನಿ ಲಿಪಿಕಾ ಮಿತ್ರಾ ಅವರ ಮೇಲೆ ದೈಹಿಕ  ಮತ್ತು ಮಾನಸಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಸೋಮನಾಥ ಭಾರ್ತಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಕೊಲೆ ಪ್ರಯತ್ನ, ದೈಹಿಕ ಹಿಂಸೆ  ಮತ್ತು ಗೃಹ ಹಿಂಸಾಚಾರ ಪ್ರಕರಣದಡಿಯಲ್ಲಿ ಭಾರ್ತಿ ವಿರುದ್ಧ ವಿಪಿಕಾ ಮಿತ್ರಾ ಅವರು ದೂರು ಸಲ್ಲಿಕೆ ಮಾಡಿದ್ದರು. ಈ ಹಿಂದೆ ಸೋಮನಾಥ ಭಾರ್ತಿ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್  ಕೂಡ ದಾಖಲು  ಮಾಡಿಕೊಂಡಿದ್ದರು.

ಕಳೆದ ಜೂನ್ 10ರಂದು ದೆಹಲಿಯ ದ್ವಾರಕಾದಲ್ಲಿರುವ ಉತ್ತರ ವಿಭಾಗದ ಪೊಲೀಸ್ ಠಾಣೆಯಲ್ಲಿ ಸೋಮನಾಥ ಭಾರ್ತಿ ಅವರ ಪತ್ನಿ ಲಿಪಿಕಾ ಮಿತ್ರಾ ಅವರು ದೂರು ಸಲ್ಲಿಕೆ ಮಾಡಿದ್ದರು.   ಸೋಮನಾಥ ಭಾರ್ತಿ ಮದುವೆಯಾದಾಗಿನಿಂದಲೂ ತಮಗೆ ದೈಹಿಕ ಹಿಂಸೆ ನೀಡುತ್ತಿದ್ದರು. ಅಲ್ಲದೆ ಒಮ್ಮೆ ಕೊಲೆಗೂ ಯತ್ನ ನಡೆಸಿದ್ದರು ಎಂದು ದೂರಿದ್ದರು. ಈ ಹಿನ್ನಲೆಯಲ್ಲಿ ಸೋಮನಾಥ   ಭಾರ್ತಿ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com