
ಶಿಮ್ಲಾ: ಅಕ್ರಮ ಆಸ್ತಿ ಗಳಿಕ ಪ್ರಕರಣ ಸಂಬಂಧ ದೆಹಲಿ ಸೇರಿದಂತೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ನಿವಾಸ ಸೇರಿದಂತೆ 11 ಸ್ಥಳಗಳ ಮೇಲೆ ಸಿಬಿಐ ಶನಿವಾರ ದಾಳಿ ನಡೆಸಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಇಂದು ವೀರಭದ್ರ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ, ನಿವಾಸ ಸೇರಿದಂತೆ 11 ಕಡೆ ಶೋಧಕಾರ್ಯಾಚರಣೆ ನಡೆಸಿದೆ.
ಹಿಮಾಚಲ ಸಿಎಂ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಇತ್ತೀಚಿಗೆ ದೆಹಲಿ ಹೈಕೋರ್ಟ್ ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗೆ ಸೂಚಿಸಿತ್ತು. ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವುದಾಗಿ ಸಿಬಿಐ ಹಾಗೂ ಐಟಿ ಇಲಾಖೆ ಕೋರ್ಟ್‌ಗೆ ತಿಳಿಸಿವೆ.
ಇಂಧನ ಸಂಸ್ಥೆಯೊಂದರ ಒಪ್ಪಂದ ಅವಧಿಯನ್ನು 10 ತಿಂಗಳು ವಿಸ್ತರಿಸಲು ವೀರಭದ್ರ ಸಿಂಗ್ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೆ ತೆರಿಗೆ ವಂಚಿಸಿದ್ದಾರೆ ಎಂದು ಸಹ ದೂರಿತ್ತು.
2009ರಿಂದ 2011ರ ಅವಧಿಯಲ್ಲಿ ಸಿಂಗ್ ಉಕ್ಕು ಸಚಿವರಾಗಿದ್ದ ಅವಧಿಯಲ್ಲಿ ಅವರ ಕುಟುಂಬ ಸುಮಾರು 6.1 ಕೋಟಿ ರುಪಾಯಿ ಅಕ್ರಮ ಆಸ್ತಿ ಗಳಿಸಿದೆ ಎಂದು ಆರೋಪಿಸಲಾಗಿದೆ.
Advertisement