
ನವದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರ ಬದುಕು ಶೋಚನೀಯವಾಗಿದೆ ಎಂದು ಮುಖ್ಯ ನ್ಯಾಯಾಧೀಶ ಹೆಚ್ ಎಲ್ ದತ್ತು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೆಚ್ ಎಲ್ ದತ್ತು ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರು. ಅಲ್ಲದೆ ಕೊಲಿಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ನಿಗ್ರಹಕ್ಕೆ ಸಾಕಷ್ಟು ವ್ಯವಸ್ಥೆಗಳಿವೆ ಎಂದು ಹೇಳಿದರು.
"ನ್ಯಾಯಾಧೀಶರ ವಿರುದ್ಧವೇ ಆರೋಪ ಮಾಡುವ ಪ್ರವೃತ್ತಿ ಪ್ರತಿಯೊಂದು ಹೈಕೋರ್ಟ್ ಗಳಲ್ಲಿನ ಕೆಲ ವಕೀಲರಿಗೆ ದೀರ್ಘಕಾಲದ ಅಭ್ಯಾಸವಾಗಿ ಹೋಗಿದೆ. ಹೀಗಾಗಿ ನ್ಯಾಯಾಧೀಶರ ವಿರುದ್ಧ ಅನಾಮಧೇಯ ದೂರುಗಳನ್ನು ಸತತವಾಗಿ ದಾಖಲಿಸುತ್ತಿರುತ್ತಾರೆ. ಸುಳ್ಳು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಅರಕ್ಷಿತರು (ರಕ್ಷಣೆ ಇಲ್ಲದವರು) ಎಂದು ಈ ವಕೀಲರಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಅವರ ವಿರುದ್ಧ ಸತತವಾಗಿ ಕಲ್ಲೆಸೆಯುವ ಕೆಲಸ ಮಾಡುತ್ತಿರುತ್ತಾರೆ. ನಿಜವಾಗಿ ಹೇಳಬೇಕೆಂದರೆ ನ್ಯಾಯಾಧೀಶರ ಬದುಕು ನಿಜಕ್ಕೂ ಶೋಚನೀಯವಾಗಿದೆ ಎಂದು ಹೆಚ್ ಎಲ್ ದತ್ತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಹೆಚ್ ಎಲ್ ದತ್ತು ಅವರು ನೇಮಕವಾದಾಗ ಅವರ ವಿರುದ್ಧವೂ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಪ್ರಮುಖವಾಗಿ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಶೇಷ ನ್ಯಾಯಾಲಯ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ನೀಡಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಅವರಿಗೆ ಜಾಮೀನು ನೀಡಿತ್ತು. ಅಂದು ಜಯಲಲಿತಾ ಅವರಿಗೆ ನ್ಯಾ.ಹೆಚ್ ಎಲ್ ದತ್ತು ಅವರು ಜಾಮೀನು ನೀಡಿದ್ದರು. ಆಗಲೂ ಸಹ ಹೆಚ್ ಎಲ್ ದತ್ತು ಅವರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ದತ್ತು ಅವರು 1000 ಕೋಟಿ ಲಂಚ ಪಡೆದು ಜಯಲಲಿತಾ ಅವರಿಗೆ ಜಾಮೀನು ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
Advertisement