

ನವದೆಹಲಿ: ಡೀಸೆಲ್ ಬೆಲೆ 50 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನೂತನ ದರ ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ.ಇದರಿಂದಾಗಿ ಡೀಸೆಲ್ ಬೆಲೆ ಈಗ ಲೀಟರ್ ಗೆ 44 ರೂಪಾಯಿ 95 ಪೈಸೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಒಂದು ತಿಂಗಳ ಹಿಂದೆ ಸೆಪ್ಟೆಂಬರ್ 1ರಂದು ಪೆಟ್ರೋಲ್ ದರ ಲೀಟರ್ ಗೆ 2 ರೂಪಾಯಿ ಇಳಿಕೆಯಾಗಿ ಡೀಸೆಲ್ 50 ಪೈಸೆ ಕಡಿಮೆಯಾಗಿತ್ತು. ಕಳೆದ 4 ತಿಂಗಳಲ್ಲಿ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು ಇದೇ ಮೊದಲು. ಮೇ 16ರಂದು ಡೀಸೆಲ್ ಬೆಲೆ ಲೀಟರ್ ಗೆ 2 ರೂಪಾಯಿ 71 ಪೈಸೆ ಹೆಚ್ಚಾಗಿತ್ತು.
ಸರ್ಕಾರಿ ಸ್ವಾಮ್ಯದ ಇಂಧನ ಪೂರೈಕೆ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗಳು ಪ್ರತಿ ತಿಂಗಳು ಒಂದು ಮತ್ತು 16ನೇ ತಾರೀಖಿನಂದು ಇಂಧನಗಳ ಆಮದು ವೆಚ್ಚ ಮತ್ತು ಹಿಂದಿನ ದಿನದ ರೂಪಾಯಿ-ಡಾಲರ್ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ದರವನ್ನು ನಿಗದಿ ಮಾಡುತ್ತವೆ.