ನವದೆಹಲಿ: ಸುಮಾರು 3600 ಕೋಟಿ ರೂಪಾಯಿಗಳ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಐಎಎಫ್ ಮುಖ್ಯಸ್ಥ ಎಸ್ಪಿ ತ್ಯಾಗಿ ಮತ್ತು ಅವರ ಸಹೋದರ ಸಂಬಂಧಿಗಳ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಮಟ್ಟುಗೋಲು ಹಾಕಿಕೊಂಡಿದೆ.
ತ್ಯಾಗಿ ಅವರ ಸಹೋದರ ಸಂಬಂಧಿಗಳಿಗೆ ಸೇರಿದೆ ಎಂದು ಹೇಳಲಾಗುತ್ತಿರುವ ರಾಜಧಾನಿ ದೆಹಲಿಯಲ್ಲಿರುವ ಒಟ್ಟು 5 ದುಬಾರಿ ಫ್ಲ್ಯಾಟ್ ಗಳನ್ನು ಜಾರಿ ನಿರ್ದೇಶನಾಲಯವು (ಇಡಿ) ಗುರುವಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿದುಬಂದಿದೆ. ತ್ಯಾಗಿ ಅವರ ಸಹೋದರ ಸಂಬಂಧಿಗಳಾದ ಸಂಜೀವ್, ಸಂದೀಪ್ ಮತ್ತು ರಾಜೀವ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಆದೇಶಗಳನ್ನು ಹೊರಡಿಸಿದ್ದು, ‘ಈ ಪ್ರಕರಣದ ತನಿಖೆಯಿಂದ ತ್ಯಾಗಿ ಸಹೋದರರು ಹೊಂದಿದ್ದ ಈ ಆಸ್ತಿಪಾಸ್ತಿಗಳಿಗೂ ಹಣ ವರ್ಗಾವಣೆ ಹಗರಣಕ್ಕೂ ಸಂಬಂಧ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಕಾನೂನು ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಜಾರಿ ನಿರ್ದೇಶನಾಯದ ಮೂಲಗಳು ತಿಳಿಸಿವೆ.
‘ಕಠಿಣ ತನಿಖೆಗಳ ಬಳಿಕ ಸುಮಾರು 6.20 ಕೋಟಿ ರೂಪಾಯಿ ಬೆಲೆಯ ತ್ಯಾಗಿ ಸಹೋದರರ ಐದು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಜಾರಿ ನಿರ್ದೇಶನಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಗುರಗಾಂವ್ನ ಐದನೇ ಹಂತದಲ್ಲಿರುವ ಫ್ಲ್ಯಾಟ್, ನೋಯಿಡಾದ ಸೆಕ್ಟರ್ 50ರಲ್ಲಿನ ಎರಡು ಫ್ಲ್ಯಾಟ್ಗಳು, ದೆಹಲಿಯ ಕೆ.ಜಿ. ರಸ್ತೆಯ ಮಾರುಕಟ್ಟೆ ಸಮೀಪದ ಒಂದು ಆಸ್ತಿ, ಮತ್ತು ಗಾಜಿಯಾಬಾದ್ನ ಕೌಶಾಂಬಿಯಲ್ಲಿರುವ ವಾಣಿಜ್ಯ ಕೇಂದ್ರದ 5ನೇ ಅಂತಸ್ತಿನ ಫ್ಲ್ಯಾಟ್ ಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿವಿಐಪಿಗಳು ಪ್ರಯಾಣಿಸುವ ಸಲುವಾಗಿ ವಾಯುಸೇನೆ ಖರೀದಿಸಲು ಮುಂದಾಗಿದ್ದ ವಿವಿಐಪಿ ಕಾಪ್ಟರ್ ಒಪ್ಪಂದದಲ್ಲಿ ಅವ್ಯವಹಾರವಾಗಿರುವ ಕುರಿತು ಇಟಲಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ಭಾರತದಲ್ಲಿಯೂ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯವು ಕಳೆದ ವರ್ಷ ಹಣ ವರ್ಗಾವಣೆ ಕಾಯ್ದೆಯ ಅಡಿಯಲ್ಲಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.
Advertisement