
ನವದೆಹಲಿ: ಇಸ್ಲಾಮಿಕ್ ಸೆಮಿನರಿ ದಾರುಲ್ ಉಲೂಂನ ಫತ್ವಾ ಇಲಾಖೆ ಹೊರಡಿಸಿರುವುವದು ಅನಧಿಕೃತವಾಗಿ ಫತ್ವಾವಾಗಿದ್ದು, ಕೂಡಲೇ ಫತ್ವಾವನ್ನು ಹಿಂಪಡೆಯಬೇಕೆಂದು ಬಿಜೆಪಿ ಶನಿವಾರ ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಝಫರ್ ಇಸ್ಲಾಂ ಅವರು, ದಾರುಲ್ ಉಲೂಂನ ಹೊರಡಿಸಿರುವ ಈ ಫತ್ವಾವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ದಾರುಲ್ ಉಲೂಂ ಒಂದು ಉತ್ತಮ ಸಮಸ್ಥೆಯಾಗಿದೆ. ಮುಸ್ಲಿಮರು ಯಾಕೆ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಬಾರದು. ಈ ಫತ್ವಾ ಅನಧಿಕೃತವಾದದ್ದು, ಕೂಡಲೇ ದಾರುಲ್ ಉಲೂಂ ಈ ಫತ್ವಾವನ್ನು ಹಿಂಪಡೆಯಬೇಕು ಎಂದು ಹೇಳಿದ್ದಾರೆ.
ದೇಶದ ಪರವಾಗಿ ಘೋಷಣೆ ಕೂಗುವುದು ದೇಶಕ್ಕೆ ಹೆಮ್ಮೆಯ ವಿಚಾರ. ಇಸ್ಲಾಂನಲ್ಲಿ ಇದಕ್ಕೆ ಅನುಮತಿಯಿದೆ. ಮುಸ್ಲಿಮರೇಕೆ ತಮ್ಮ ದೇಶದ ಪರವಾಗಿ ಘೋಷಣೆ ಕೂಗಬಾರದು. ಈ ರೀತಯ ಫತ್ವಾಗಳನ್ನು ಉನ್ನತ ಸ್ಥಾನದಲ್ಲಿರುವ ಸಂಸ್ಥೆಗಳು ಹೊರಡಿಸಬಾರದು. ಪೂಜೆಗೂ ಹಾಗೂ ಹೊಗಳಿಕೆಗೂ ವ್ಯತ್ಯಾಸಗಳಿವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇಂತಹ ಫತ್ವಾ ಹೊರಡಿಕೆಯಿಂದ ಪ್ರಚೋದನಾಕಾರಿ ಭಾಷಣಗಳನ್ನು ನಂಬುವ, ರಾಜಕೀಯದಲ್ಲಿ ಒಡಕುಂಟು ಮಾಡುವ ಓವೈಸಿಯಂತಹ ಜನರು ಲಾಭ ಪಡೆಯುವುದರಿಂದ ಕೂಡಲೇ ಸಂಸ್ಥೆ ತನ್ನ ಫತ್ವಾವನ್ನು ಹಿಂಪಡೆಯಬೇಕು ಮತ್ತು ಇಸ್ಲಾಂ ಧರ್ಮದಲ್ಲಿ ಇದಕ್ಕೆ ಅನುಮತಿಯಿದೆ ಎಂದು ಜನರಿಗೆ ಅರ್ಥ ಮಾಡಿಸಬೇಕು. ಇಂತಹ ಫತ್ವಾ ಹೊರಡಿಕೆಯಿಂದ ಓವೈಸಿಯಂತವಹರಿಗೆ ದಾರೂಲ್ ಬಲಿಪಶುವಾಗಲಿದೆ ಎಂದು ಹೇಳಿದ್ದಾರೆ.
ಭಾರತ್ ಮಾತಾ ಕಿ ಜೈ ಘೋಷಣೆ ವಿರೋಧಿಸಿ ಹೈದರಾಬಾದ್ ನ ಇಸ್ಲಾಮಿಕ್ ಸೆಮಿನರಿ ಜಾಮಿಯಾ ನಿಝಾಮಿಯಾ ಇಲಾಖೆಯೊಂದು ಫತ್ವಾ ಹೊರಡಿಸಿರುವುದಾಗಿ ಹೇಳಲಾಗುತ್ತಿತ್ತು. ಈ ಫತ್ವಾವನ್ನು ಕಳೆದ ತಿಂಗಳು ಹೊರಡಿಸಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಸ್ಲಾಮಿಕ್ ಸೆಮಿನರಿ ದಾರುಲ್ ಉಲೂಂನ ಫತ್ವಾ ಇಲಾಖೆ ಸೆಮಿನರಿ ಹೊರಡಿಸಿರುವ ಫತ್ವಾದಲ್ಲಿ, ಇಸ್ಲಾಂ ಧರ್ಮವು ಮೂರ್ತಿ ಪೂಜೆಯನ್ನು ಅನುಮತಿಸದಿರುವುದರಿಂದ ಈ ಧರ್ಮದ ಅನುಯಾಯಿಗಳು ಭಾರತ್ ಮಾತಾ ಕಿ ಜೈ ಘೋಷಣೆ ಕೂಗಬಾರದು. ಮನುಷ್ಯರು ಮಾತ್ರ ಮನುಷ್ಯರಿಗೆ ಜನ್ಮ ನೀಡಲು ಸಾಧ್ಯ. ಭೂಮಿ ಜನ್ಮದಾತೆ ಆಗಲು ಸಾಧ್ಯವಿಲ್ಲ. ಭಾರತವು ಭೂಮಿಯನ್ನು ದೇವತೆ ಎಂದು ಪೂಜಿಸುತ್ತದೆ. ಅದು ಅವರ ವೈಯಕ್ತಿಕ ನಂಬಿಕೆ. ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ. ಆದರೆ, ಪೂಜಿಸುವುದಿಲ್ಲ. ಇಸ್ಲಾಂ ಧರ್ಮ ಕೇವಲ ಒಂದು ದೇವರನ್ನು ಮಾತ್ರ ಪೂಜಿಸುತ್ತದೆ ಎಂದು ಹೇಳಲಾಗಿದೆ. ಇದೀಗ ಈ ಫತ್ವಾ ಹಲವು ವಿರೋಧಕ್ಕೆ ಕಾರಣವಾಗಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ.
ಈ ಹಿಂದೆ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿ ಆರ್ ಎಸ್ಎಸ್ ಸಭೆಯಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಜೆಎನ್ ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳು ಕೇಳಿಬಂದಿವೆ. ಪ್ರತಿಯೊಬ್ಬರೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗವಂತಾಗಬೇಕು. ಯುವಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಬೇಕೆಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಹೈದರಾಬಾದ್ ನ ಸಂಸದ ಓವೈಸಿ, ನನ್ನ ಕುತ್ತಿಗೆ ಮೇಲೆ ಚೂರಿ ಇಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ. ಘೋಷಣೆಯನ್ನು ಕೂಗಿ, ದೇಶಭಕ್ತಿ ಸಾಬೀತುಪಡಿಸಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಹಾಗಾಗಿ ಕಾನೂನು ಉಲ್ಲಂಘನೆಯ ಪ್ರಶ್ನೆ ಇಲ್ಲಿ ಹುಟ್ಟುವುದಿಲ್ಲ. ಈ ನಿಲುವಿಗೆ ನಾನು ಬದ್ಧನಾಗಿದ್ದೇನೆ ಯಾವುದೇ ಕಾರಣಕ್ಕೂ ಘೋಷಣೆ ಕೂಗುವುದಿಲ್ಲ ಎಂದು ಹೇಳಿದ್ದರು.
Advertisement