ಕೋಲ್ಕತಾ: 26 ಜನರನ್ನು ಬಲಿ ಪಡೆದ ಕೋಲ್ಕತಾ ಫ್ಲೈ ಓವರ್ ದುರಂತಕ್ಕೆ ಸಂಬಂಧಿಸಿದಂತೆ 10 ಕಂಪನಿಗಳ ನೌಕರರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಫ್ಲೈ ಓವರ್ ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಈಗಗಾಲೇ 69 ಜನರನ್ನು ರಕ್ಷಿಸಲಾಗಿದೆ. ಆದರೂ ಅವಶೇಷಗಳಡಿ ಮತ್ತಷ್ಟು ಜನ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಸಹ ಅವಶೇಷಗಳಡಿ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ದೆಬಶಿಶ್ ಚಕ್ರಬೊರ್ತಿ ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐವಿಆರ್ ಸಿಎಲ್ ಇನ್ಫ್ರಾಸ್ಟ್ಟಕ್ಟರ್ ಕಂಪನಿಯ ಮೂವರು ಉದ್ಯೋಗಿಗಳನ್ನು ಬಂಧಿಸಲಾಗಿದ್ದು, ಅವರನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ.
ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಇತರೆ ಏಲು ನೌಕರರನ್ನು ಬಂಧಿಸಲಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಂಧಿತ ಈ ಎಲ್ಲಾ ನೌಕರರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದು, ಒಂದು ವೇಳೆ ಕೊಲೆ ಪ್ರಕರಣ ದಾಖಲಾದರೆ, ಆರೋಪಿಗಳಿಗೆ ಗರಿಷ್ಠ ಗಲ್ಲು ಶಿಕ್ಷೆ, ಜೀವಾವಧಿ ಶಿಕ್ಷೆ ಅಥವಾ ಕನಿಷ್ಠ ಏಳು ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.