

ಜಮ್ಮು: ಕಣಿವೆ ರಾಜ್ಯವಾಗಿರುವ ಜಮ್ಮು ಮತ್ತು ಕಾಶ್ಮೀರ ಕಳೆದ 3 ತಿಂಗಳಿಂದ ನಡೆಯುತ್ತಿದ್ದ ಸಾಂವಿಧಾನಿಕ ಬಿಕ್ಕಟ್ಟು ಕೊನೆಗೂ ನಿವಾರಣೆಯಾಗಿದ್ದು, ದೇಶದ ಮೊದಲ ಮುಸ್ಲಿಂ ಮಹಿಳಾ ಮುಖ್ಯಮಂತ್ರಿಯಾಗಿ ಮೆಹಬೂಬಾ ಮುಫ್ತಿಯವರು ಸೋಮವಾರ ಪ್ರಮಾಣವಚನ ಸ್ವೀಕಾರ ಮಾಡುವ ಮೂಲಕ ಅಧಿಕಾರದ ಗದ್ದುಗೆಗೆ ಏರಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಶ್ರೀನಗರದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಎನ್ ಎನ್ ವೋಹ್ರಾ ಅವರು ಮುಫ್ತಿಯವರಿಗೆ ಪ್ರತಿಜ್ಞಾವಿಧಿ ಭೋದಿಸಿದ್ದಾರೆ.
ಮೆಹಬೂಬಾ ಮುಫ್ತಿಯವರು ಮುಖ್ಯಮಂತ್ರಿಯಾಗಿ ಹಾಗೂ ಉಪ ಮುಖ್ಯಮಂತ್ರಿ ಆಗಿ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇನ್ನು 16 ಮಂದಿ ಕ್ಯಾಬಿನೆಟ್ ಸಚಿವರಾಗಿ ಹಾಗೂ 8 ಜನ ರಾಜ್ಯ ಸಚಿವರಾಗಿ ಹಾಗೂ ಇಬ್ಬರು ಬಿಜೆಪಿ ಶಾಸಕರು ಸ್ವತಂತ್ರ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಮರ ಸಂಖ್ಯೆಯೇ ಹೆಚ್ಚಾಗಿದ್ದು, ಇದೀಗ ಮುಫ್ತಿ ಅವರು ಕಣಿವೆ ರಾಜ್ಯಕ್ಕೆ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ದೇಶದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.
ಕಳೆದ ವರ್ಷ ಪಿಡಿಪಿ ಪಕ್ಷದ ಮುಫ್ತಿ ಮೊಹಮ್ಮದ್ ಸಯೀದ್ ಅವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಇದರಂತೆ ಮೈತ್ರಿ ಸರ್ಕಾರಗಳು ಯಾವುದೇ ಸಮಸ್ಯೆಯಿಲ್ಲದೆ 10 ತಿಂಗಳ ಕಾಲ ಅಧಿಕಾರ ನಡೆಸಿತ್ತು. ಆದರೆ, ಜ.7 ರಂದು ಮುಫ್ತಿ ಮೊಹಮ್ಮದ್ ಸಯೀದ್ ಅವರ ನಿಧನದ ನಂತರ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದವು.
ಈ ಭಿನ್ನಾಭಿಪ್ರಾಯಗಳು ಮತ್ತೆ ಮೈತ್ರಿ ಸರ್ಕಾರಗಳು ಒಂದಾಗುವುದಿಲ್ಲ, ಒಡೆದುಹೋಗುತ್ತವೆ ಎಂಬಂತಹ ವಾತಾವರಣವನ್ನು ಸೃಷ್ಟಿ ಮಾಡಿತ್ತು. ನಂತರ ಈ ಬಿಕ್ಕಟ್ಟು ಪ್ರಧಾನಮಂತ್ರಿ ನರೇಂದ್ರಮೋದಿಯವರು ಮಧ್ಯಸ್ಥಿಕೆ ವಹಿಸುವ ಮೂಲಕ ಬಗೆಹರಿದಿತ್ತು. ಇದೀಗ ಪಿಡಿಪಿ ಹಾಗೂ ಬಿಜೆಪಿ ಮೈತ್ರಿಗೊಂಡಿದ್ದು, ಜಮ್ಮು-ಕಾಶ್ಮೀರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ.