ಅಖಿಲೇಶ್ ಯಾದವ್ ವಿರುದ್ಧ ಬುಂದೇಲ್ ಖಂಡ್ ಪರಿಹಾರ ನಿಧಿಯ ಕೀರ್ತಿ ಪಡೆಯಲು ಯತ್ನಿಸುತ್ತಿರುವ ಆರೋಪ

ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಬುಂದೇಲ್ ಖಂಡ್ ಬರ ಪರಿಹಾರ ನಿಧಿ ಹಂಚಿಕೆಯ ಕೀರ್ತಿಯನ್ನು ಪಡೆಯಲು ಯತ್ನಿಸುತ್ತಿರುವ ಆರೋಪ ಮಾಡಿದೆ.
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್

ಲಖನೌ: ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಬುಂದೇಲ್ ಖಂಡ್ ಬರ ಪರಿಹಾರ ನಿಧಿ ಹಂಚಿಕೆಯ ಕೀರ್ತಿಯನ್ನು ಪಡೆಯಲು ಯತ್ನಿಸುತ್ತಿರುವ ಆರೋಪ ಮಾಡಿದೆ.
ಸರ್ಕಾರ ಬುಂದೇಲ್ ಖಂಡ್ ನಲ್ಲಿ ಹಂಚಿಕೆ ಮಾಡುತ್ತಿರುವ ಬರಪರಿಹಾರ ಸಾಮಗ್ರಿಗಳು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯದ್ದು. ಪರಿಹಾರ ನಿಧಿಯ ಶೇ.75 ರಷ್ಟು ಪಾಲು ಕೇಂದ್ರ ಸರ್ಕಾರದಿಂದ ನೀಡಲಾಗಿದ್ದು ಶೇ.25 ರಷ್ಟನ್ನು ರಾಜ್ಯ ಸರ್ಕಾರ ಭಾರಿಸಿದೆ. ಆದರೆ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಈ ಪರಿಹಾರ ನಿಧಿ ಹಂಚಿಕೆಯ ಸಂಪೂರ್ಣ ಕೀರ್ತಿಯನ್ನು ತಾವೊಬ್ಬರೇ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯ ವಕ್ತಾರ ವಿಜಯ್ ಬಹದ್ದೂರ್ ಪಾಠಕ್ ಹೇಳಿದ್ದಾರೆ.
ಬರ ಪರಿಹಾರ ಸಾಮಗ್ರಿಗಳ ಬ್ಯಾಗ್ ನಲ್ಲಿ ಅಖಿಲೇಶ್ ಯಾದವ್ ಫೋಟೊ ಮಾತ್ರ ಮುದ್ರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಹಾಕಲಾಗಿಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ಆಕ್ಷೇಪಿಸಿದ್ದು, ಬುಂದೇಲ್ ಖಂಡ್ ಪರಿಹಾರ ನಿಧಿಯ ಕೀರ್ತಿ ಪಡೆಯಲು ಅಖಿಲೇಶ್ ಯಾದವ್ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸರ್ಕಾರದ ವಕ್ತಾರರೊಬ್ಬರು, ಕೇಂದ್ರ ಸರ್ಕಾರ 3 ತಿಂಗಳ ಅವಧಿಗೆ ಮಾತ್ರ ಬರ ಪರಿಹಾರ ನಿಧಿ ನೀಡುತ್ತಿತ್ತು. ಆದರೆ ರಾಜ್ಯ ಸರ್ಕಾರ ಒಂದು ವರ್ಷ ಪೂರ್ತಿ ಬರಪರಿಹಾರ ಸಾಮಗ್ರಿ ನೀಡಲು ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ. ಬುಂದೇಲ್ ಖಂಡ್ ಗಾಗಿ 7 ,000 ಕೋಟಿ ರೂ ಪ್ಯಾಕೇಜ್ ಬೇಡಿಕೆಯನ್ನು ಎನ್ ಡಿಎ ಸರ್ಕಾರ ಈಡೇರಿಸಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವುದಕ್ಕೂ ಮುನ್ನ ಬಿಜೆಪಿ ನಾಯಕರು ಬುಂದೇಲ್ ಖಂಡ್ ನ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದೇ ಇರುವುದರ ಬಗ್ಗೆ ಮಾತನಾಡಲಿ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com