
ಮುಂಬೈ: 2002-03ರವರೆಗೆ ಮುಂಬೈನಲ್ಲಿ ನಡೆಸಲಾಗಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೋಟ ವಿಶೇಷ ನ್ಯಾಯಾಲಯ ಬುಧವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದು, ಪ್ರಮುಖ ಅಪರಾಧಿಯಾಗಿರುವ ಮುಝಾಮ್ಮಿಲ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಮುಝಾಮಿಲ್ ಅನ್ಸಾರಿ, ವಹೀದ್ ಅನ್ಸಾರಿ, ಫರಾನ್ ಖೊತ್ ಗೆ ಜೀವಾವಧಿ ಶಿಕ್ಷೆ ವಿಧಿಸಿರುವ ನ್ಯಾಯಾಲಯವು, ಉಳಿದ ಅಪರಾಧಿಗಳಾದ ಸಕ್ವಿಬ್ ನಚನ್, ಅತೀಫ್ ಮುಲ್ಲಾ, ಹಸೀಬ್ ಮುಲ್ಲಾರಿಗೆ 10 ವರ್ಷ ಜೈಲು ಶಿಕ್ಷೆ ನೀಡಿದೆ.
ಮಾರ್ಚ್ 29ರಂದು ನಡೆದ ವಿಚಾರಣೆ ವೇಳೆ 13 ಆರೋಪಿಗಳ ಪೈಕಿ 10 ಮಂದಿಯನ್ನು ತಪ್ಪಿತಸ್ತರೆಂದು ನ್ಯಾಯಾಲಯ ಘೋಷಣೆ ಮಾಡಿತ್ತು. ಅಲ್ಲದೆ ಇನ್ನು ಮೂವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಇದೀಗ ಉಳಿದ 10 ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.
ಪ್ರಕರಣ ಸಂಬಂಧ ಇಂದು ನಡೆದ ವಿಚಾರಣೆ ವೇಳೆ ವಿಶೇಷ ನ್ಯಾಯಾಲದ ನ್ಯಾಯಾಧೀಶ ಪಿ.ಆರ್. ದೇಶ್ ಮುಖ್ ಅವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣದ ತೀರ್ಪು ನೀಡಿದ್ದಾರೆ.
2002ರ ಡಿಸೆಂಬರ್ 6ರಂದು ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣ ಸಮೀಪದ ಮೆಕ್ ಡೋನಾಲ್ಡ್ ರೆಸ್ಟೋರೆಂಟ್, 2003ರ ಜನವರಿ 3ರಂದು ವಿಲೆ ಪಾರ್ಲೆ ಜನಸಂದಣಿ ಪ್ರದೇಶದಲ್ಲಿ ಹಾಗೂ 2003ರ ಮಾರ್ಚ್ 13ರಂದು ಮುಲುಂಡ್ ರೈಲ್ವೆ ನಿಲ್ದಾಣದಲ್ಲಿ ಜನಜಂಗುಳಿಯಿಂದ ತುಂಬಿದ್ದ ರೈಲಿನಲ್ಲಿ ಬಾಂಬ್ ಸ್ಫೋಟಿಸಿದ್ದರು. ಘಟನೆಯಲ್ಲಿ 12ಮಂದಿ ಸಾವನ್ನಪ್ಪಿದ್ದು, 27 ಜನರು ಗಾಯಗೊಂಡಿದ್ದರು.
Advertisement