ಭಾರತ್ ಮಾತಾ ಘೋಷಣೆ ವಿವಾದ: ನಾಯಕರ ಹೇಳಿಕೆ ಸರ್ಕಾರದ ಅಧಿಕೃತ ಅನಿಸಿಕೆಯಲ್ಲ- ನಾಯ್ಡು

ಭಾರತ್ ಮಾತಾ ಕಿ ಜೈ ಘೋಷಣೆ ವಿವಾದ ಸಂಬಂಧ ಸಾಕಷ್ಟು ವಿವಾದಗಳು ಸೃಷ್ಟಿಯಾಗುತ್ತಿದ್ದರೂ ಈ ವರೆಗೂ ಮೌನವಾಗಿಯೇ ಇದ್ದ ಸರ್ಕಾರ ಇದೇ ಮೊದಲು ತನ್ನ...
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು (ಸಂಗ್ರಹ ಚಿತ್ರ)
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು (ಸಂಗ್ರಹ ಚಿತ್ರ)
Updated on: 

ನವದೆಹಲಿ: ಭಾರತ್ ಮಾತಾ ಕಿ ಜೈ ಘೋಷಣೆ ವಿವಾದ ಸಂಬಂಧ ಸಾಕಷ್ಟು ವಿವಾದಗಳು ಸೃಷ್ಟಿಯಾಗುತ್ತಿದ್ದರೂ ಈ ವರೆಗೂ ಮೌನವಾಗಿಯೇ ಇದ್ದ ಸರ್ಕಾರ ಇದೇ ಮೊದಲು ತನ್ನ ಮೌನವನ್ನು ಮುರಿದಿದ್ದು, ನಾಯಕರು ನೀಡುತ್ತಿರುವ ಹೇಳಿಕೆಗಳು ಸರ್ಕಾರದ ಅಧಿಕೃತ ಅನಿಸಿಕೆಯಲ್ಲ ಎಂದು ಹೇಳಿದೆ.

ವಿವಾದ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಭಾರತ್ ಮಾತಾ ಕಿ ಜೈ ಸಂಬಂಧ ನಾಯಕರು ನೀಡುತ್ತಿರುವ ಹೇಳಿಕೆಗಳು ಅವರ ವೈಯಕ್ತಿಕ ಅನಿಸಿಕೆಯೇ ಹೊರತು, ಇದು ಸರ್ಕಾರ ಅಧಿಕೃತ ಅಭಿಪ್ರಾಯವಲ್ಲ ಎಂದು ಹೇಳಿದ್ದಾರೆ.

ಭಾರತೀಯ ಮಹಿಳೆಯರ ಪ್ರೆಸ್ ಕಾರ್ಪ್ಸ್'ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ವಿವಾದ ಸಂಬಂಧ ಸರ್ಕಾರದ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರು ಸಾಕಷ್ಟು ವಿಷಯಗಳಿಗೆ ಸಾಕಷ್ಟು ಹೇಳಿಕೆಯನ್ನು ನೀಡುತ್ತಿರುತ್ತಾರೆ. ಆದರೆ, ಅಂತಿಮವಾಗಿ ಸರ್ಕಾರ ತನ್ನ ನಿರ್ಧಾರದ ಮೂಲಕ ಎಲ್ಲದಕ್ಕೂ ತೆರೆಯೆಳೆಯುತ್ತದೆ. ವಿವಾದವೊಂದು ಭಾವನಾತ್ಮಕ ವಿಚಾರ. ಆದರೆ, ಘೋಷಣೆ ಕೂಗಲೇಬೇಕೆಂಬ ಕಡ್ಜಾಯವಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಪಕ್ಷದ ನಾಯಕರು ವಿವಾದ ಸಂಬಂಧ ನೀಡುತ್ತಿರುವ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿರುವ ಅವರು, ಘೋಷಣಾ ವಾಕ್ಯವನ್ನು ಧನಾತ್ಮಕವಾಗಿ ಪರಿಗಣಿಸಬೇಕು. ಭಗತ್ ಸಿಂಗ್ ತಮ್ಮ ಕೊನೆ ಕ್ಷಣ ಗಲ್ಲಿಗೇರಬೇಕಾದ ಸಂದರ್ಭದಲ್ಲೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದರು. ಘೋಷಣೆ ವಾಕ್ಯ ಸ೦ವೇದನಾಶಕ್ತಿಯನ್ನು ಹೊಂದಿದೆ.

ಭಾರತ್ ಮಾತಾ ಕಿ ಜೈ ಎಂಬುದು ಕೇವಲ ಘೋಷಣಾ ವಾಕ್ಯವಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸ್ಫೂರ್ತಿ ಮಂತ್ರ. ಲಕ್ಷಾಂತರ ಜನರ ಹೃದಯ ಬಡಿತ 'ಭಾರತ್ ಮಾತಾ ಕಿ ಜೈ' ಘೋಷಣೆ ಎಂದು ಹೇಳಿದ್ದಾರೆ.

ಈ ಹಿಂದಷ್ಟೇ ಮೋಹನ್ ಭಾಗವತ್ ಅವರು ಕಾರ್ಯಕ್ರಮವೊಂದರಲ್ಲಿ ಜೆಎನ್ ಯು ವಿವಾದ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದರು. ಜೆಎನ್ ಯು ಆವರಣದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಲಾಗುತ್ತಿದ್ದು, ಪ್ರತಿಯೊಬ್ಬರು ಭಾರತ್ ಮಾತಾ ಕಿ ಜೈ ಹೇಳುವಂತಾಗಬೇಕೆಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಓವೈಸಿ ಕುತ್ತಿಗೆ ಮೇಲೆ ಚೂರಿ ಇಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ ಎಂದು ಹೇಳಿದ್ದರು. ಓವೈಸಿ ಹೇಳಿಕೆಗೆ ದೇಶದಾದ್ಯಂತ್ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಇದೀಗ ಈ ವಿವಾದಕ್ಕೆ ರಾಜಕೀಯ ಬಣ್ಣ ಕೂಡ ಸುತ್ತಿಕೊಂಡಿದ್ದು, ನಾಯಕರು ವಿವಾದಾತ್ಯಕ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ.

ವಿವಾದ ಸಂಬಂಧ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಲಿಲ್ಲ ಎಂದಾದರೆ ಅವರಿಗೆ ದೇಶದಲ್ಲಿರುವ ಹಕ್ಕಿಲ್ಲ. ದೇಶ ಬಿಟ್ಟು ಹೋಗಬಹುದು ಎಂದು ಹೇಳಿದ್ದರು.

ನಂತರ ಇದೇ ವಿವಾದ ಸಂಬಂಧ ಬಾಬಾ ರಾಮ್ ದೇವ್ ಅವರು, ನಾವು ನಮ್ಮ ದೇಶದ ಕಾನೂನು ಹಾಗೂ ಸಂವಿಧಾನವನ್ನು ಗೌರವಿಸುತ್ತೇವೆ. ಒಂದು ವೇಳೆ ಇದಾವೂದೂ ಇರಲಿಲ್ಲ ಎಂದಾಗಿದ್ದರೆ, ಘೋಷಣೆ ಕೂಗದವರ ತಲೆ ಕಡಿದುಬಿಡುತ್ತಿದ್ದೆವು ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com